Thu. Jul 30th, 2026

ಕಾಲೇಜು ವಿದ್ಯಾರ್ಥಿಗಳಲ್ಲಿ 7,000 ಹೆಚ್‌ಐವಿ ಪಾಸಿಟಿವ್ ವರದಿ ಸುಳ್ಳು; ಕಡ್ಡಾಯ ತಪಾಸಣೆ ಆದೇಶಿಸಿಲ್ಲ: ಕೆಎಸ್‌ಎಪಿಎಸ್ ಸ್ಪಷ್ಟನೆ

Share this with Friends

ಬೆಂಗಳೂರು:ರಾಜ್ಯದ ಪದವಿ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಹೆಚ್.ಐ.ವಿ ಸೋಂಕು ತಗುಲಿದೆ ಎಂಬ ಆತಂಕಕಾರಿ ಸುದ್ದಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ್ದ ಈ ಸುದ್ದಿಯನ್ನು ಕಟುವಾಗಿ ತಳ್ಳಿಹಾಕಿರುವ ಆರೋಗ್ಯ ಇಲಾಖೆಯ ಅಂಗಸಂಸ್ಥೆಯಾದ ಕೆಎಸ್‌ಎಪಿಎಸ್, ಈ ವರದಿಗಳು ವಾಸ್ತವಕ್ಕೆ ದೂರವಾಗಿವೆ ಎಂದು ಹೇಳಿದೆ.

ಈ ಕುರಿತು ಅಧಿಕೃತವಾಗಿ ಸ್ಪಷ್ಟನೆ ನೀಡಿರುವ ಯೋಜನಾ ನಿರ್ದೇಶಕರಾದ ಪದ್ಮ ಬಸವಂತಪ್ಪ, “ನಮ್ಮ ಇಲಾಖೆಯು ಹೆಚ್.ಐ.ವಿ ಪಾಸಿಟಿವ್ ದತ್ತಾಂಶಗಳನ್ನು ವಿದ್ಯಾರ್ಥಿಗಳು ಅಥವಾ ನಿರ್ದಿಷ್ಟ ವೃತ್ತಿ-ಹಿನ್ನೆಲೆಯ ಆಧಾರದ ಮೇಲೆ ವರ್ಗೀಕರಿಸಿ ನಿರ್ವಹಿಸುವುದಿಲ್ಲ. ಹಾಗಾಗಿ ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಇಲಾಖೆಯಲ್ಲಿ ಯಾವುದೇ ಪ್ರತ್ಯೇಕ ಅಂಕಿ-ಅಂಶಗಳಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ತಪಾಸಣೆ ಕಡ್ಡಾಯಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ!

ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್.ಐ.ವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ ಎಂಬ ಸುದ್ದಿಯನ್ನೂ ನಿರ್ದೇಶಕರು ನಿರಾಕರಿಸಿದ್ದಾರೆ. ದೇಶದ ಹೆಚ್.ಐ.ವಿ/ಏಡ್ಸ್ (ಪ್ರತಿಬಂಧಕ ಮತ್ತು ನಿಯಂತ್ರಣ) ಕಾಯ್ದೆ 2017ರ ನಿಯಮಗಳ ಅನ್ವಯ, ಯಾವುದೇ ವ್ಯಕ್ತಿಗೆ ಅವರ ಒಪ್ಪಿಗೆಯಿಲ್ಲದೆ ಬಲವಂತವಾಗಿ ಹೆಚ್.ಐ.ವಿ ಪರೀಕ್ಷೆ ನಡೆಸಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಸೂಕ್ತ ಆಪ್ತಸಮಾಲೋಚನೆ (Counselling) ನಡೆಸಿದ ಬಳಿಕ ಅವರ ಲಿಖಿತ ಒಪ್ಪಿಗೆಯ ಮೇರೆಗೆ ಮಾತ್ರವೇ ಸ್ವಯಂಪ್ರೇರಿತ ತಪಾಸಣೆ ನಡೆಸಬಹುದಾಗಿದೆ ಎಂದು ಅವರು ವಿವರಿಸಿದ್ದಾರೆ.

ಜಾಗೃತಿ ಮೂಡಿಸಲು ಕಾಲೇಜುಗಳಲ್ಲಿ ಸ್ವಯಂಪ್ರೇರಿತ ಆರೋಗ್ಯ ಶಿಬಿರ

ಯುವ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಇಲಾಖೆಯು ಇತ್ತೀಚೆಗೆ ವಿವಿಧ ಕಾಲೇಜುಗಳು, ಕೈಗಾರಿಕೆಗಳು ಹಾಗೂ ವಲಸೆ ಕಾರ್ಮಿಕರಿಗಾಗಿ ವಿಶೇಷ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲು ಸುತ್ತೋಲೆ ಹೊರಡಿಸಿತ್ತು. ಇದರ ಮುಖ್ಯ ಉದ್ದೇಶ ಕೇವಲ ಅರಿವು ಮೂಡಿಸುವುದು ಮತ್ತು ಸ್ವಯಂಪ್ರೇರಿತ ತಪಾಸಣೆಯನ್ನು ಉತ್ತೇಜಿಸುವುದೇ ಹೊರತು ಯಾವುದೇ ಕಡ್ಡಾಯ ನಿಯಮಾವಳಿಗಳಲ್ಲ.

ವೈರಲ್ ಆಗಿರುವ 7,000 ಸಂಖ್ಯೆಯು ತಪ್ಪು ಗ್ರಹಿಕೆಯಿಂದ ಕೂಡಿದ್ದು, ಹಿಂದಿನ ಹಲವು ವರ್ಷಗಳ ಒಟ್ಟು ವಾರ್ಷಿಕ ಸಂಚಿತ ಅಂಕಿ-ಅಂಶಗಳನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಸಾರ್ವಜನಿಕರು ಇಂತಹ ಸೂಕ್ಷ್ಮ ವಿಷಯಗಳ ಕುರಿತು ಅಧಿಕೃತ ಮೂಲಗಳಿಂದ ದೃಢೀಕರಿಸಿದ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಬೇಕು ಎಂದು ಪದ್ಮ ಬಸವಂತಪ್ಪ ಮನವಿ ಮಾಡಿದ್ದಾರೆ.

 


Share this with Friends

Related Post