Sat. Aug 1st, 2026

ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್‌ಗೆ ಜಯ: ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಎಂ.ಕೆ. ಪ್ರಾಣೇಶ್ ರಾಜೀನಾಮೆ 

Share this with Friends

ಬೆಂಗಳೂರು:ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿ ಹಾಗೂ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಬಿಜೆಪಿ ಸದಸ್ಯರಾದ ಎಂ.ಕೆ. ಪ್ರಾಣೇಶ್ ಅವರು ತಮ್ಮ ಉಪಸಭಾಪತಿ ಹುದ್ದೆ ಹಾಗೂ ವಿಧಾನ ಪರಿಷತ್ ಸದಸ್ಯ (MLC) ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.

ಬಿಜೆಪಿ ಹಿರಿಯ ನಾಯಕ ಎಂ.ಕೆ. ಪ್ರಾಣೇಶ್ ಅವರು ದಿಢೀರ್ ರಾಜೀನಾಮೆ ನೀಡಿರುವುದರ ಹಿಂದೆ ದೊಡ್ಡ ಕಾನೂನು ಮತ್ತು ರಾಜಕೀಯ ಹಗ್ಗಜಗ್ಗಾಟವಿದೆ. ಹೈಕೋರ್ಟ್ ಆದೇಶದಂತೆ ನಡೆದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು ವಿಜಯಭೇರಿ ಬಾರಿಸಿದ್ದಾರೆ. ಈ ಫಲಿತಾಂಶ ಹೊರಬೀಳುತ್ತಿದ್ದಂತೆ ಪ್ರಾಣೇಶ್ ಅವರು ತಮ್ಮ ಸ್ಥಾನಗಳಿಗೆ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಗಿ ಬಂದಿದೆ.

ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್‌ಗೆ 9 ಮತಗಳ ಗೆಲುವು!

ಹಿಂದೆ ನಡೆದಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಎಂ.ಕೆ. ಪ್ರಾಣೇಶ್ ಅವರು ಕೇವಲ 6 ಮತಗಳ ಅಂತರದಿಂದ ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ ವಿರುದ್ಧ ಗೆಲುವು ಸಾಧಿಸಿದ್ದರು. ಆದರೆ, ಈ ಚುನಾವಣೆಯಲ್ಲಿ ಮತದಾನದ ಹಕ್ಕು ಇಲ್ಲದ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ನಾಮನಿರ್ದೇಶಿತ (Nominated) ಸದಸ್ಯರು ಮತ ಚಲಾಯಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಭ್ಯರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಸುದೀರ್ಘ ಕಾನೂನು ಹೋರಾಟದ ಬಳಿಕ, ನಾಮನಿರ್ದೇಶಿತ ಸದಸ್ಯರ ಮತಗಳನ್ನು ಹೊರತುಪಡಿಸಿ ಮರು ಮತ ಎಣಿಕೆ ನಡೆಸುವಂತೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಅದರಂತೆ ನಡೆದ ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ ಅವರು 9 ಮತಗಳ ಅಂತರದಿಂದ ಅಧಿಕೃತವಾಗಿ ಗೆಲುವು ಸಾಧಿಸಿದ್ದಾರೆ.

ಸ್ವ-ಇಚ್ಛೆಯಿಂದ ರಾಜೀನಾಮೆ ಪತ್ರ ಸಲ್ಲಿಕೆ

ಮರು ಎಣಿಕೆ ಫಲಿತಾಂಶದಲ್ಲಿ ಹಿನ್ನಡೆಯಾಗಿ ತಮ್ಮ ಸದಸ್ಯತ್ವ ರದ್ದಾಗುವುದು ಖಚಿತವಾಗುತ್ತಿದ್ದಂತೆ, ಎಂ.ಕೆ. ಪ್ರಾಣೇಶ್ ಅವರು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಎರಡು ಸಾಲುಗಳ ರಾಜೀನಾಮೆ ಪತ್ರ ರವಾನಿಸಿದ್ದಾರೆ. “ವಿಧಾನ ಪರಿಷತ್ತಿನ ಉಪಸಭಾಪತಿ ಹುದ್ದೆ ಮತ್ತು ಶಾಸಕ ಸ್ಥಾನಕ್ಕೆ ನಾನು ಸ್ವ-ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದು, ಸದರಿ ರಾಜೀನಾಮೆ ಪತ್ರವನ್ನು ಅಂಗೀಕರಿಸುವಂತೆ ಕೋರುತ್ತೇನೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮೇಲ್ಮನೆಯಲ್ಲಿ ಬದಲಾದ ರಾಜಕೀಯ ಲೆಕ್ಕಾಚಾರ

ಎಂ.ಕೆ. ಪ್ರಾಣೇಶ್ ಅವರ ನಿರ್ಗಮನ ಹಾಗೂ ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ ಅವರ ಗೆಲುವಿನಿಂದಾಗಿ 75 ಸದಸ್ಯ ಬಲದ ವಿಧಾನ ಪರಿಷತ್‌ನಲ್ಲಿ ಪಕ್ಷಗಳ ಬಲಾಬಲ ಬದಲಾಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಂಖ್ಯಾಬಲ 40ಕ್ಕೆ ಏರಿಕೆಯಾಗಿದ್ದು, ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಯ ಬಲ 27ಕ್ಕೆ ಕುಸಿದಿದೆ. ಇದರಿಂದ ಮುಂಬರುವ ಅಧಿವೇಶನದಲ್ಲಿ ತೆರವಾಗಲಿರುವ ಉಪಸಭಾಪತಿ ಸ್ಥಾನವನ್ನು ಸುಲಭವಾಗಿ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್‌ಗೆ ಹಾದಿ ಸುಗಮವಾಗಿದೆ.

 


Share this with Friends

Related Post