Sat. Jun 6th, 2026

ನೀಟ್ ಅಕ್ರಮ: ಪ್ರಧಾನಿ ಮೋದಿ, ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ಒತ್ತಾಯ

Share this with Friends

ಬೆಂಗಳೂರು: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಸಂಪೂರ್ಣ ಜವಾಬ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೇ ಹೊರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಫ್ರೀಡಂ ಪಾರ್ಕ್ ನಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ನೀಟ್ ಪರೀಕ್ಷಾ ಅಕ್ರಮಗಳ   ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.”ದೇಶದ ಭವಿಷ್ಯವಾಗಿರುವ ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳಿಗೆ ಕೇಂದ್ರ ಸರ್ಕಾರ ದ್ರೋಹ ಬಗೆದಿದೆ. ಪರೀಕ್ಷಾ ವ್ಯವಸ್ಥೆಯ ವೈಫಲ್ಯದಿಂದ ಕಂಗಾಲಾಗಿರುವ ನೀಟ್ ವಿದ್ಯಾರ್ಥಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೇಷರತ್ ಆಗಿ ಕ್ಷಮೆಯಾಚಿಸಬೇಕು,” ಎಂದು ಸಿಎಂ ಆಗ್ರಹಿಸಿದ್ದಾರೆ.

ಕರ್ನಾಟಕ ಮತ್ತಿತರೆ ರಾಜ್ಯಗಳಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಬಯಸುವವರಿಗೆ ಸಿಇ ಟಿ ಪರೀಕ್ಷೆ ಪಾರದರ್ಶಕವಾಗಿ ನಡೆಯುತ್ತಿತ್ತು. ನರೇಂದ್ರ ಮೋದಿಯವರು 2014 ರಲ್ಲಿ ಪ್ರಧಾನಿಗಳಾದ ನಂತರ ಹಿಂದೆ ಇದ್ದ ಪದ್ಧತಿಯನ್ನು ಬದಲಾಯಿಸಿ 2016 ರಲ್ಲಿ ನೀಟ್ ಪರೀಕ್ಷೆಯನ್ನು ಜಾರಿಗೆ ತಂದರು. ಹತ್ತು ವರ್ಷಗಳಲ್ಲಿ ಐದು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ನೀಟ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಒಂದು ವರ್ಷದಿಂದ ತಯಾರಿ ಮಾಡಿಕೊಂಡಿರುತ್ತಾರೆ. ಅನೇಕರು ಕೋಚಿಂಗ್ ಸೆಂಟರ್ ಗಳಲ್ಲಿ ತರಬೇತಿ ಪಡೆಯಲು ಸಾವಿರಾರು ರೂ ವೆಚ್ಚ ಮಾಡಿರುತ್ತಾರೆ. ಹಣವಿದ್ದವರು ಕೋಚಿಂಗ್ ಪಡೆಯುತ್ತಾರೆ, ಹಣ ಇಲ್ಲದ ಬಡವರು, ಗ್ರಾಮೀಣ ಪ್ರದೇಶದ ಮಕ್ಕಳು ಕೋಚಿಂಗ್ ಪಡೆಯಲಾಗುವುದಿಲ್ಲ ಎಂದರು.

ರಾಜ್ಯಗಳಿಗೇ ಪರೀಕ್ಷಾ ಹಕ್ಕು ನೀಡಿ:

ಪ್ರಸ್ತುತ ಇರುವ ಕೇಂದ್ರೀಕೃತ ಪರೀಕ್ಷಾ ಪದ್ಧತಿಯಿಂದ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ನೀಟ್ ಪದ್ಧತಿಯನ್ನು ಕೈಬಿಡಬೇಕು ಎಂದು ಜಾಗತಿಕ ಮಟ್ಟದಲ್ಲಿ ಧ್ವನಿ ಎತ್ತಿದ್ದಾರೆ. ಆಯಾ ರಾಜ್ಯಗಳಲ್ಲಿರುವ ವೈದ್ಯಕೀಯ ಕಾಲೇಜುಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಸ್ವತಂತ್ರವಾಗಿ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರಗಳಿಗೇ ಸಂಪೂರ್ಣ ಅಧಿಕಾರ ಮತ್ತು ಮುಕ್ತ ಅವಕಾಶವನ್ನು ನೀಡಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಬಲವಾಗಿ ಒತ್ತಾಯಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಅವಧಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಗಳು ಮರುಕಳಿಸಿವೆ

ಕಳೆದ ಬಿಜೆಪಿ ಸರ್ಕಾರದ  ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿ ಇಂಜಿನಿಯರ್, ಸಬ್ ಇನ್ಸ್ಪೆಕ್ಟರ್  ನೇಮಕಾತಿ ಯ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಸಂಬಂಧ ಎಡಿಜಿಪಿಯಾಗಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಜೈಲಿಗೆ ಹೋಗಿರುವುದು ಕರ್ನಾಟಕದ ಇತಿಹಾಸದಲ್ಲಿ ಎಂದಿಗೂ ನಡೆದಿರಲಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಇಂತಹ ಪ್ರಶ್ನೆ  ಪತ್ರಿಕೆ ಸೋರಿಕೆಗಳು ಬಹಳಷ್ಟು ನಡೆದಿವೆ. ಇದರ ಹೊಣೆಗಾರಿಕೆಯನ್ನು ಪ್ರಧಾನಿ ಮೋದಿಯವರು ಹೊರಬೇಕಿದೆ. ಆದರೆ ಅವರು ಪ್ರಸ್ತುತ ಇಟಲಿ ದೇಶಕ್ಕೆ ವಿದೇಶ ಪ್ರವಾಸದಲ್ಲಿದ್ದಾರೆ ಎಂದರು.

ಶೇ. 69 ರಷ್ಟು ಯುವಜನತೆ ನಿರುದ್ಯೋಗಿಗಳಾಗಿದ್ದಾರೆ

ದೇಶದ ಜನರಿಗೆ ಚಿನ್ನ ಖರೀದಿಸಬೇಡಿ, ಪೆಟ್ರೋಲ್ ಡೀಸೆಲ್ ಮಿತವ್ಯಯ ಮಾಡಿ, ವಿದೇಶ ಪ್ರವಾಸ ಮಾಡಬೇಡಿ ಎಂದು ಕರೆ ನೀಡಿ, ತಾವು ಮಾತ್ರ ಐದು ದೇಶಗಳ ವಿದೇಶಿ ಪ್ರವಾಸದಲ್ಲಿದ್ದಾರೆ. ದೇಶದಲ್ಲಿ 20 ರಿಂದ 29 ವಯೋಮಾನದ ಯುವಕ ಯುವತಿಯರಲ್ಲಿ ಶೇ. 67 ರಷ್ಟು ಯುವಜನತೆ ನಿರುದ್ಯೋಗಿಗಳಾಗಿದ್ದಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಒದಗಿಸುವ ಮೂಲಕ ಕಳೆದ 12 ವರ್ಷಗಳ ಪ್ರಧಾನಿ ಮೋದಿಯವರ ಆಡಳಿತದಲ್ಲಿ 24 ಕೋಟಿ ಉದ್ಯೋಗಗಳು ಸೃಷ್ಠಿಯಾಗಬೇಕಿತ್ತು. ಆದರೆ ಈವರೆಗೆ 2 ಕೋಟಿಯಷ್ಟೂ ಉದ್ಯೋಗವನ್ನು  ಕೊಡಲಾಗಲಿಲ್ಲ ಎಂದರು.

ಬಿಜೆಪಿ ಆರ್ ಎಸ್ ಎಸ್ ನವರಿಂದ ದ್ವೇಷ ಹುಟ್ಟುಹಾಕುವ ಹುನ್ನಾರ

ಸಮಾಜದಲ್ಲಿ ಹಿಂದುಮುಸ್ಲಿಂ ನಡುವೆ ದ್ವೇಷ ಹುಟ್ಟುಹಾಕುವ ವ್ಯವಸ್ಥಿತವಾದ ಹುನ್ನಾರವನ್ನು ಬಿಜೆಪಿ, ಆರ್ ಎಸ್ ಎಸ್ ಹಾಗೂ ಎಬಿವಿಪಿ ಮಾಡುತ್ತಿದೆ. ದೇಶದಲ್ಲಿ 2016 ರಿಂದ ಇಲ್ಲಿಯವರೆಗೆ 5 ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಆದ್ದರಿಂದ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಕೇವಲ ನೀಟ್ ಪರೀಕ್ಷೆಯನ್ನು ಮುಂದೂಡುವ ಜೊತೆಗೆ , ಪ್ರಕರಣದ ಹೊಣೆಹೊತ್ತು ರಾಜೀನಾಮೆಯನ್ನು ಹೊರಬೇಕು. ಆದರೆ ಬಿಜೆಪಿಯವರು ಭಂಡತನ ಪ್ರದರ್ಶಿಸಿ ರಾಜಿನಾಮೆ ಕೊಡಲು ಮನಸ್ಸು ಮಾಡುತ್ತಿಲ್ಲ. ಕೇಂದ್ರ ಶಿಕ್ಷಣ ಸಚಿವರು ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡುವವರೆಗೂ ಇಲ್ಲಿನ ಹೋರಾಟವನ್ನು ಮುಂದುವರೆಸಬೇಕು ಎಂದರು.

ನೀಟ್ ವಿದ್ಯಾರ್ಥಿಗಳ ಆತ್ಮಹತ್ಯೆ- ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ

ಸತತ ಪರಿಶ್ರಮ ನೀಡಿದ್ದ ವಿದ್ಯಾರ್ಥಿಗಳು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಕರಣದಿಂದ ಹತಾಶರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿತ್ತು. ಅವರು ರಾಜಿನಾಮೆಯನ್ನು ಕೊಡಬೇಕೆಂದು ಒತ್ತಾಯ ಮಾಡಿದರು. ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣರಾದ ಪ್ರಕರಣದ ರೂವಾರಿಗಳನ್ನು ಕೊಲೆಗಾರರೆಂದು ಪರಿಗಣಿಸಿ  ಶಿಕ್ಷೆ ನೀಡಬೇಕು. ಪ್ರಧಾನಿ ಮೋದಿಯವರು ತಮ್ಮ ವಿದೇಶಿ ಪ್ರವಾಸವನ್ನು ಮೊಟಕುಗೊಳಿಸಿ, ನೀಟ್ ಪರೀಕ್ಷೆ ಬರೆದ ಯುವಜನರ ಬೇಷರತ್ ಕ್ಷಮೆ ಯಾಚಿಸಬೇಕು ಎಂದರು.

 

 


Share this with Friends

Related Post