Thu. Jun 11th, 2026

ರೌಡಿಗಳ ಜೊತೆ ಸೆಲ್ಫಿ, ಊಟಕ್ಕೆ ಹೋದರೆ ಸಸ್ಪೆಂಡ್: ಸೈಬರ್ ಕ್ರೈಂ ಪತ್ತೆಗೆ ಹೈಟೆಕ್ ನೀತಿ ಘೋಷಿಸಿದ ಸಚಿವ ಪ್ರಿಯಾಂಕ್ ಖರ್ಗೆ

Share this with Friends

ಬೆಂಗಳೂರು: ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು. ಪೊಲೀಸ್ ಇಲಾಖೆಯ ಒಟ್ಟಾರೆ ಕಾರ್ಯವೈಖರಿ, ಮಹಿಳಾ ಸುರಕ್ಷತೆ, ಮಾನವ ಕಳ್ಳಸಾಗಣೆ ತಡೆ ಹಾಗೂ ಮಕ್ಕಳ ಮೇಲಿನ ಅಪರಾಧಗಳನ್ನು ಮುಕ್ತವಾಗಿ ಹತ್ತಿಕ್ಕುವ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.

ಬೆಂಗಳೂರನ್ನು ಸುರಕ್ಷಿತ ಮತ್ತು ಮಾದರಿ ನಗರವನ್ನಾಗಿ ಮಾಡಲು ಗೃಹ ಸಚಿವರು ಪ್ರಕಟಿಸಿರುವ 4 ಪ್ರಮುಖ ನಿರ್ಧಾರಗಳು ಇಲ್ಲಿವೆ:

1. ಡ್ರಗ್ಸ್ ವಿರುದ್ಧ ಶೂನ್ಯ-ಸಹಿಷ್ಣುತೆ ನೀತಿ:

ಬೆಂಗಳೂರನ್ನು ಮಾದಕ ಮುಕ್ತ ನಗರವನ್ನಾಗಿ ಮಾಡಲು ಇಲಾಖೆಗೆ ಮುಕ್ತ ಅಧಿಕಾರ ನೀಡಲಾಗಿದೆ. ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

2. ಟ್ರಾಫಿಕ್ ನಿರ್ವಹಣೆಗೆ ಹೊಸ ಸಂಚಾರ ಕ್ರಾಂತಿ:

ನಗರದ ಅತಿ ದೊಡ್ಡ ಸಮಸ್ಯೆಯಾದ ಟ್ರಾಫಿಕ್ ದಟ್ಟಣೆಯನ್ನು ಕೇವಲ ರಸ್ತೆ ಮೂಲಸೌಕರ್ಯ ಬದಲಾವಣೆಯಿಂದ ಮಾತ್ರ ನಿಯಂತ್ರಿಸಲು ಸಾಧ್ಯವಿಲ್ಲ. ವ್ಯವಸ್ಥಿತ ಲೋಪಗಳನ್ನು ಸರಿಪಡಿಸಲು ಬಿಎಂಟಿಸಿ, ಬಿಎಂಆರ್‌ಸಿಎಲ್ ಹಾಗೂ ಖಾಸಗಿ ಸಹಭಾಗಿತ್ವದೊಂದಿಗೆ ‘ಬೆಂಗಳೂರು ಅರ್ಬನ್ ಮೊಬಿಲಿಟಿ ಮಿಷನ್’ ತಂಡವನ್ನು ರಚಿಸಲಾಗುವುದು. ಇದರ ಸಂಪೂರ್ಣ ನೀಲಿ ನಕ್ಷೆಯನ್ನು (Blue Print) ಮುಂದಿನ 2-3 ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು.

3. ಪೊಲೀಸ್ ಠಾಣೆಗಳಲ್ಲಿ ವಿಶೇಷ ರೌಡಿ ನಿಗ್ರಹ ಪಡೆ:

ಪ್ರತಿಯೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ‘ವಿಶೇಷ ರೌಡಿ ನಿಗ್ರಹ ಪಡೆ’ ರಚಿಸಲು ಆದೇಶಿಸಲಾಗಿದೆ. ಕೆಳಹಂತದ ಪೊಲೀಸ್ ಅಧಿಕಾರಿಗಳು ಅಥವಾ ಸಿಬ್ಬಂದಿ ರೌಡಿಗಳ ಬರ್ತ್‌ಡೇ ಪಾರ್ಟಿಗಳಲ್ಲಿ ಭಾಗವಹಿಸುವುದು, ಒಟ್ಟಿಗೆ ಊಟ ಮಾಡುವುದು ಅಥವಾ ಸೆಲ್ಫಿ ತೆಗೆದುಕೊಳ್ಳುವಂತಹ ಕೃತ್ಯಗಳಲ್ಲಿ ತೊಡಗುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

4. ಸೈಬರ್ ಅಪರಾಧ ತಡೆಗೆ ಜಂಟಿ ಕಾರ್ಯಪಡೆ:

ಜಾಗತಿಕ ಮಟ್ಟದಲ್ಲಿ ಬೆಂಗಳೂರು 4ನೇ ಅತಿ ದೊಡ್ಡ ತಂತ್ರಜ್ಞಾನ ಹಬ್ ಆಗಿರುವುದರಿಂದ ಸೈಬರ್ ಕ್ರೈಂ ಹೆಚ್ಚುತ್ತಿದೆ. ಇದನ್ನು ಮಟ್ಟಹಾಕಲು ಗೃಹ ಇಲಾಖೆ, ಐಟಿ-ಬಿಟಿ ಮತ್ತು ಇ-ಆಡಳಿತ ಇಲಾಖೆಗಳನ್ನು ಒಗ್ಗೂಡಿಸಿ ಸಮಗ್ರ ನೀತಿಯನ್ನು ಜಾರಿಗೆ ತರಲಾಗುವುದು. ಮುಂದಿನ ವಾರ ಖಾಸಗಿ ಟೆಕ್ ಕಂಪನಿಗಳೊಂದಿಗೆ ವಿಶೇಷ ಸಭೆ ನಡೆಸಿ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ‘ಸೇಫ್ಟಿ ಗಾರ್ಡ್ ರೈಲ್ಸ್’ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಮಾದಕ ದ್ರವ್ಯ ಜಾಲ ಹಾಗೂ ನಕಲಿ ಸುದ್ದಿಗಳ ವಿರುದ್ಧ ಗೃಹ ಇಲಾಖೆ ಖಡಕ್ ಮುನ್ನೆಚ್ಚರಿಕೆ: 

ರಾಜ್ಯದಲ್ಲಿ ಮಾದಕ ವಸ್ತುಗಳ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಗೃಹ ಇಲಾಖೆಯು ನೆರೆ ರಾಜ್ಯಗಳ ಗಡಿಭಾಗಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲು ನಿರ್ಧರಿಸಿದೆ. ಕೇರಳ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಿಂದ ಕದ್ದುಮುಚ್ಚಿ ಸರಬರಾಜಾಗುವ ನಿಷೇಧಿತ ಮಾತ್ರೆಗಳು ಹಾಗೂ ಸೈಕೋಟ್ರೋಪಿಕ್ ಪದಾರ್ಥಗಳನ್ನು ಪತ್ತೆಹಚ್ಚಲು ಗಡಿ ಠಾಣೆಗಳಿಗೆ ಅತ್ಯಾಧುನಿಕ ಟೆಸ್ಟಿಂಗ್ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಗೃಹ ಇಲಾಖೆ ತಿಳಿಸಿದೆ.

ಇಲಾಖೆಯು ಕೈಗೊಂಡಿರುವ ಪ್ರಮುಖ ಸುಧಾರಣಾ ಕ್ರಮಗಳು ಇಲ್ಲಿವೆ:

ಅಕ್ರಮ ವಿದೇಶಿಗರ ಗಡಿಪಾರಿಗೆ ವೇಗ:

ನಗರದಲ್ಲಿ ಕಾನೂನುಬಾಹಿರವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಾಸ್ತವ್ಯಕ್ಕೆ ಬ್ರೇಕ್ ಹಾಕಲು ಮತ್ತು ಅವರ ಗಡಿಪಾರು ಪ್ರಕ್ರಿಯೆಯನ್ನು ಚುರುಕುಗೊಳಿಸಲು ಕೇಂದ್ರ ವಿದೇಶಾಂಗ ಸಚಿವಾಲಯದೊಂದಿಗೆ ಮಾತುಕತೆ ನಡೆಸಲಾಗುವುದು. ಈ ಇಡೀ ಡ್ರಗ್ಸ್ ನಿಯಂತ್ರಣ ಪ್ರಕ್ರಿಯೆಗೆ ಜಾಗತಿಕ ಮಟ್ಟದ ಅತ್ಯುತ್ತಮ ತಂತ್ರಜ್ಞಾನ ಹಾಗೂ ಮಾದರಿಗಳನ್ನು ಬಳಸಿಕೊಂಡು ಮುಂದಿನ ಎರಡು ವಾರಗಳಲ್ಲಿ ಸಮಗ್ರ ನೀಲಿ ನಕ್ಷೆಯನ್ನು ಸಿದ್ಧಪಡಿಸಲಾಗುವುದು.

ವಿಳಂಬ ಧೋರಣೆ ತೋರುವ ಅಧಿಕಾರಿಗಳಿಗೆ ಶಿಕ್ಷೆ:

ಸಾರ್ವಜನಿಕರು ದೂರು ನೀಡಿದ ನಂತರ ಉದ್ದೇಶಪೂರ್ವಕವಾಗಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡುವುದು ಅಥವಾ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲು ಕಾಲಹರಣ ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಲಾಗುವುದು. ಪ್ರಾಸಿಕ್ಯೂಷನ್ ಪ್ರಕ್ರಿಯೆಯಲ್ಲಿ ಯಾವುದೇ ತಾರತಮ್ಯ ಎಸಗದೆ ಪಾರದರ್ಶಕತೆ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ದ್ವೇಷ ಭಾಷಣ ಮತ್ತು ನಕಲಿ ಸುದ್ದಿಗಳಿಗೆ ಬ್ರೇಕ್:

ಸಮಾಜದಲ್ಲಿ ಶಾಂತಿ ಕದಡುವ ದ್ವೇಷ ಭಾಷಣಗಳು (Hate Speech) ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ನಕಲಿ ಸುದ್ದಿಗಳ (Fake News) ವಿರುದ್ಧ ಕಠಿಣ ನಿಗಾ ವಹಿಸಲು ಸೈಬರ್ ವಿಭಾಗಕ್ಕೆ ಸೂಚಿಸಲಾಗಿದೆ. ಸುರಕ್ಷಿತ ಮತ್ತು ಸ್ಮಾರ್ಟ್ ಸಿಟಿ ವಾತಾವರಣವಿದ್ದರೆ ಮಾತ್ರ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಲು ಹಾಗೂ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಸಾಧ್ಯ. ಹೀಗಾಗಿ ಕರ್ನಾಟಕದ ಉಜ್ವಲ ಭವಿಷ್ಯ ನಿರ್ಮಿಸುವಲ್ಲಿ ಬೆಂಗಳೂರು ನಗರ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ದೊಡ್ಡದಾಗಿದೆ ಎಂದು ಇಲಾಖೆ ಒತ್ತಿಹೇಳಿದೆ.

 

 


Share this with Friends

Related Post