ಬೆಂಗಳೂರು: ರಾಜಧಾನಿಯ ಘನತ್ಯಾಜ್ಯ ನಿರ್ವಹಣೆ ಟೆಂಡರ್ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ ಭಾರಿ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಲೋಕಾಯುಕ್ತಕ್ಕೆ ಅಧಿಕೃತ ದೂರು ಸಲ್ಲಿಸಿದ್ದಾರೆ.
ಲೋಕಾಯುಕ್ತ ಕಚೇರಿಯಲ್ಲಿ ರಿಜಿಸ್ಟ್ರಾರ್ ಅವರಿಗೆ ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಕಸ ವಿಲೇವಾರಿ ಗುತ್ತಿಗೆಯಲ್ಲಿ ಬರೋಬ್ಬರಿ 39,437 ಕೋಟಿ ರೂಪಾಯಿಗಳ ಹಗರಣ ನಡೆದಿದೆ. ಕೇವಲ ಕಮಿಷನ್ ದಂದೆಗಾಗಿಯೇ ಟೆಂಡರ್ ನಿಯಮಗಳನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದರು. ಈ ಗಂಭೀರ ದೂರಿನ ಕುರಿತು ತಕ್ಷಣವೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತ ಸಂಸ್ಥೆಯು ಭರವಸೆ ನೀಡಿದೆ ಎಂದು ಅವರು ತಿಳಿಸಿದರು.
ಕಿಕ್‌ಬ್ಯಾಕ್ ಹಾಗೂ ಲೂಟಿ ಆರೋಪ:
ಈ ಬೃಹತ್ ಅಕ್ರಮದಲ್ಲಿ ಕಾಂಗ್ರೆಸ್ ನಾಯಕರು ದೊಡ್ಡ ಮಟ್ಟದ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದ ಆರ್. ಅಶೋಕ್, ಟೆಂಡರ್ ಪರಿಶೀಲನೆಗಾಗಿ ರಚಿಸಲಾಗಿದ್ದ ಎರಡು ಪ್ರಮುಖ ಸಮಿತಿಗಳ ಶಿಫಾರಸುಗಳನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ನಿರ್ದಿಷ್ಟ ಗುತ್ತಿಗೆದಾರ ಸಂಸ್ಥೆಗೆ ಅನಗತ್ಯ ಲಾಭ ಮಾಡಿಕೊಡುವ ಉದ್ದೇಶದಿಂದ, ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ನಿಗದಿಪಡಿಸಿ 30 ವರ್ಷಗಳ ಸುದೀರ್ಘ ಅವಧಿಗೆ ಗುತ್ತಿಗೆ ನೀಡಲಾಗಿದೆ. ಈ ಮೂಲಕ ಬೆಂಗಳೂರಿನ ಪ್ರಾಮಾಣಿಕ ತೆರಿಗೆದಾರರ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಹೈಕಮಾಂಡ್ ಎಟಿಎಂ:
ಕರ್ನಾಟಕವನ್ನು ಕಾಂಗ್ರೆಸ್ ವರಿಷ್ಠರ ಎಟಿಎಂ ಆಗಿ ಬಳಸಲಾಗುತ್ತಿದ್ದು, ಸ್ವತಃ ಮುಖ್ಯಮಂತ್ರಿಗಳೇ ಈ ವಿವಾದಿತ ಟೆಂಡರ್ ಫೈಲ್‌ಗೆ ತರಾತುರಿಯಲ್ಲಿ ಸಹಿ ಹಾಕಿದ್ದಾರೆ. ಒಂದೇ ಒಂದು ಖಾಸಗಿ ಕಂಪನಿಯ ಹಿತರಕ್ಷಣೆಗಾಗಿ ಇಡೀ ಸರ್ಕಾರವೇ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಕೇವಲ ಒಂದು ವಾರದಲ್ಲೇ ಇಷ್ಟು ದೊಡ್ಡ ಹಗರಣ ಮುನ್ನೆಲೆಗೆ ಬಂದಿದೆ ಎಂದು ಲೇವಡಿ ಮಾಡಿದ ಅಶೋಕ್, ಈ ವಿಷಯವನ್ನು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸದನದ ಒಳಗೂ ಮತ್ತು ಹೊರಗೂ ದೊಡ್ಡ ಮಟ್ಟದ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು.

