Fri. Jul 3rd, 2026

ರಾಮನಗರದಲ್ಲಿ ಭೀಕರ ಕಲ್ಲು ಕ್ವಾರಿ ದುರಂತ: ಬಂಡೆ ಕುಸಿದು 7 ಕಾರ್ಮಿಕರು ದಾರುಣ ಸಾವು; ಐವರಿಗೆ ಗಂಭೀರ ಗಾಯ!

Share this with Friends

ರಾಮನಗರ: ಜಿಲ್ಲೆಯ ತಾವರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಪಟ್ಟಣ ಗ್ರಾಮದ ಬಳಿ ಇರುವ ಕಾವೇರಿ ಕ್ರಷರ್‌ನಲ್ಲಿ ಗುರುವಾರ ಮುಂಜಾನೆ ಭೀಕರ ದುರಂತವೊಂದು ಸಂಭವಿಸಿದೆ. ಕಲ್ಲು ಕ್ವಾರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಬೃಹತ್ ಬಂಡೆಯೊಂದು ಕುಸಿದು ಬಿದ್ದ ಪರಿಣಾಮ 7 ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಘಟನೆಯ ವೇಳೆ ಕ್ವಾರಿಯ ಕೆಳಭಾಗದಲ್ಲಿ ಒಟ್ಟು 16 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಬಂಡೆ ಬಿದ್ದ ರಭಸಕ್ಕೆ ಸ್ಥಳದಲ್ಲಿದ್ದ ಮೂರು ಟ್ರ್ಯಾಕ್ಟರ್‌ಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಮೃತದೇಹಗಳು ಅವಶೇಷಗಳಡಿ ಸಿಲುಕಿದ್ದವು.

ಮೃತರ ಗುರುತು ಪತ್ತೆ:

ದುರಂತದಲ್ಲಿ ಮೃತಪಟ್ಟವರನ್ನು ರಾಮು (46), ರಾಜಪಾಲ್ ಸಿಂಗ್ (35), ಸತ್ಯನಾರಾಯಣ ಸಿಂಗ್ (31), ರಾಮ ವತಾರ್ ಸಿಂಗ್ (31), ರಾಜೇಂದ್ರ ಪ್ರಸಾದ್, ನೂಹರ್ ಸಿಂಗ್ ಮತ್ತು ಭುವನೇಶ್ವರ ಸಿಂಗ್ ಎಂದು ಗುರುತಿಸಲಾಗಿದೆ.

ಐವರಿಗೆ ತೀವ್ರ ಗಾಯ:

ಈ ಭೀಕರ ಅವಘಡದಲ್ಲಿ ಉತ್ತರ ಭಾರತ ಮೂಲದ ನಾಲ್ವರು ಹಾಗೂ ಕರ್ನಾಟಕದ ಓರ್ವ ಕಾರ್ಮಿಕ ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಾದ ಗುಲಾಬ್ ಸಿಂಗ್ (27), ರಾಜ್ ಪಾಲ್ (30), ಚೋಟು (24), ನೋಹರ್ ಸಿಂಗ್ (21) ಮತ್ತು ಆನಂದ್ (30) ಅವರನ್ನು ಮೈಸೂರು ರಸ್ತೆಯ ಆರ್.ಆರ್. ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಒಬ್ಬರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ:

ಘಟನಾ ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ಎಸ್.ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, “ಅವಘಡದ ತನಿಖೆಗಾಗಿ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ತೀವ್ರ ಸಂತಾಪ:

ಕಲ್ಲು ಕ್ವಾರಿ ದುರಂತದ ಬಗ್ಗೆ ಮುಖ್ಯಮಂತ್ರಿಗಳು ತೀವ್ರ ಕಳವಳ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರಿಗೆ ಈ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಉದ್ಯೋಗಿಗಳ ಜೀವ ರಕ್ಷಣೆ ಮತ್ತು ಸುರಕ್ಷತೆ ಒದಗಿಸುವುದು ಕ್ವಾರಿ ಮಾಲೀಕರ ಹೊಣೆಯಾಗಿದ್ದು, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಮತ್ತು ಅಕ್ರಮವಾಗಿ ಕಾರ್ಯಾಚರಿಸುವ ಕ್ವಾರಿಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಿದೆ ಎಂದು ಮುಖ್ಯಮಂತ್ರಿಗಳು ಎಕ್ಸ್ (ಟ್ವಿಟರ್) ಮೂಲಕ ಭರವಸೆ ನೀಡಿದ್ದಾರೆ.

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಂತಾಪ

ರಾಮನಗರದ ಮಾದಪಟ್ಟಣದ ಕಾವೇರಿ ಕ್ರಷರ್‌ನಲ್ಲಿ ಬಂಡೆ ಕುಸಿದು ಕಾರ್ಮಿಕರು ಮೃತಪಟ್ಟಿರುವ ಸುದ್ದಿ ತಿಳಿದು ಕೇಂದ್ರ ಇಂಧನ ಹಾಗೂ ಭಾರಿ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

“ನನ್ನ ನೆಚ್ಚಿನ ರಾಮನಗರ ಜಿಲ್ಲೆಯಲ್ಲಿ ಇಂತಹದೊಂದು ಭೀಕರ ಕಲ್ಲು ಕ್ವಾರಿ ದುರಂತ ಸಂಭವಿಸಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ. ಹೊಟ್ಟೆಪಾಡಿಗಾಗಿ ಅನ್ಯ ರಾಜ್ಯಗಳಿಂದ ಬಂದು ಇಲ್ಲಿ ದುಡಿಯುತ್ತಿದ್ದ ಬಡ ಕಾರ್ಮಿಕರು ಬಂಡೆಯಡಿ ಸಿಲುಕಿ ಪ್ರಾಣ ಕಳೆದುಕೊಂಡಿರುವುದು ಮನಸ್ಸಿಗೆ ತೀವ್ರ ವೇದನೆ ಉಂಟುಮಾಡಿದೆ. ಮೃತರ ಆತ್ಮಕ್ಕೆ ಭಗವಂತ ಸದ್ಗತಿಯನ್ನು ಕರುಣಿಸಲಿ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಮಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಾಗಿದ್ದು, ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಬಿ.ವೈ. ವಿಜಯೇಂದ್ರ ಕಳವಳ ಹಾಗೂ ಸಂತಾಪ

ಭೀಕರ ಅವಘಡದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

“ರಾಮನಗರದ ಕ್ರಷರ್‌ನಲ್ಲಿ ಮುಂಜಾನೆ ಸಂಭವಿಸಿದ ಕಲ್ಲು ಕ್ವಾರಿ ದುರಂತದಲ್ಲಿ 7 ಮಂದಿ ಜೀವ ಕಳೆದುಕೊಂಡಿರುವ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಮೃತರ ಕುಟುಂಬಸ್ಥರಿಗೆ ಈ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ನೀಡಲಿ. ಗಾಯಾಳುಗಳಿಗೆ ಸೂಕ್ತ ಹಾಗೂ ಉಚಿತ ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಲು ಸರ್ಕಾರ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು. ಕ್ವಾರಿಗಳಲ್ಲಿ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ, ಮೃತರ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು” ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

 

 


Share this with Friends

Related Post