Sat. Jun 6th, 2026

ಸೋಮಣ್ಣ ನಮ್ಮ ಪಕ್ಷದ ಹೈಕಮಾಂಡ್ ಅಲ್ಲ; ಬಿಜೆಪಿಯದ್ದು ದ್ವಂದ್ವ ನೀತಿ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

Share this with Friends

ಬಾಗಲಕೋಟೆ: “ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡಲು ವಿ.ಸೋಮಣ್ಣ ನಮ್ಮ ಪಕ್ಷದ ಹೈಕಮಾಂಡ್ ಅಲ್ಲ. ಅವರು ಬಿಜೆಪಿಯಲ್ಲಿ ಕೆಲಸವಿಲ್ಲದ ಮಂತ್ರಿ,” ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಸೋಮಣ್ಣ ಅವರಿಗೆ ಪ್ರಚಾರ ಮಾಡಲು ಸಮಯವಿಲ್ಲ ಎಂದಲ್ಲ, ಸೋಲುವ ಭಯದಿಂದ ಅವರು ಪ್ರಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರ ಮಾತಿನಲ್ಲಿ ಸತ್ಯವಿಲ್ಲದ ಕಾರಣ ನಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ,” ಎಂದರು.

ಬಿಜೆಪಿಯ ಹೀನಾಯ ಸ್ಥಿತಿಗೆ ಸಾಕ್ಷಿ:

ಪಕ್ಷದಿಂದ ಉಚ್ಛಾಟಿಸಲ್ಪಟ್ಟಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೇ ಕಾಡಿ-ಬೇಡಿ ಪ್ರಚಾರಕ್ಕೆ ಕರೆತಂದಿರುವುದು ಬಿಜೆಪಿಯ ದ್ವಂದ್ವ ನೀತಿಯನ್ನು ತೋರಿಸುತ್ತದೆ. ಇದು ರಾಜ್ಯದಲ್ಲಿ ಬಿಜೆಪಿ ಎಂತಹ ಹೀನಾಯ ಸ್ಥಿತಿಯಲ್ಲಿದೆ ಎಂಬುದಕ್ಕೆ ಸಾಕ್ಷಿ ಎಂದು ಸಿದ್ದರಾಮಯ್ಯ ಟೀಕಿಸಿದರು.

ಸಿಲಿಂಡರ್ ಬೆಲೆ ಏರಿಕೆ: ಮೋದಿ ಮನೆಗೆ ಮುತ್ತಿಗೆ ಹಾಕಿ

ಗ್ಯಾಸ್ ಸಿಲಿಂಡರ್ ಪೂರೈಕೆ ಮತ್ತು ಬೆಲೆ ನಿಯಂತ್ರಣ ಕೇಂದ್ರ ಸರ್ಕಾರದ ಜವಾಬ್ದಾರಿ. ರಾಜ್ಯ ಸರ್ಕಾರ ಕೇವಲ ವಿತರಣೆ ಮಾಡುತ್ತದೆ. ಆಟೋ ಚಾಲಕರು ರಾಜ್ಯ ಆಹಾರ ಸಚಿವರ ಮನೆಗೆ ಮುತ್ತಿಗೆ ಹಾಕುವ ಬದಲು, ಪ್ರಧಾನಿ ನರೇಂದ್ರ ಮೋದಿ ಅವರ ಮನೆಗೆ ಮುತ್ತಿಗೆ ಹಾಕಬೇಕು ಎಂದು ಸಲಹೆ ನೀಡಿದರು.

ಅಲ್ಪಸಂಖ್ಯಾತರು ಈ ರಾಜ್ಯದ ನಾಗರಿಕರಲ್ಲವೇ?

ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂಬ ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, “ಇದು ದ್ವೇಷದ ರಾಜಕಾರಣ. ಅಲ್ಪಸಂಖ್ಯಾತರು ಈ ರಾಜ್ಯದ ನಾಗರಿಕರಲ್ಲವೇ? ಅವರ ಜನಸಂಖ್ಯೆ ಶೇ.14ರಷ್ಟಿದ್ದು, ಎಲ್ಲ ಸಮುದಾಯಗಳಿಗೆ ನೀಡಿದಂತೆ ಅವರಿಗೂ ಅನುದಾನ ನೀಡಲಾಗಿದೆ,” ಎಂದು ಸ್ಪಷ್ಟಪಡಿಸಿದರು.

 


Share this with Friends

Related Post