Sun. Jun 7th, 2026

ಎವರೆಸ್ಟ್‌ ಆರೋಹಣ ಮಾಡಿದ ಇಬ್ಬರು ಕನ್ನಡಿಗರಿಗೆ ಸನ್ಮಾನ

Share this with Friends

ಬೆಂಗಳೂರು: ಹಣ, ಆಸ್ತಿ, ಸಂಪತ್ತು ಗಳಿಕೆ ಖುಷಿ ಕೊಡುತ್ತದೆ ಎಂಬುದು ನಿಜ, ಆದರೆ ಸಾಧನೆಗಳ ಮುಂದೆ ಈ ಎಲ್ಲ ಸಂಪತ್ತುಗಳ ಗೌಣ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಬಣ್ಣಿಸಿದರು.ಸಂಪತ್ತು ಗಳಿಕೆಯಿಂದ ಚೆನ್ನಾಗಿರಬಹುದು. ಆದರೆ ಅದರ ಹೊರತಾಗಿಯೂ ಜೀವನ ಇದೆ. ಸಾಧನೆಗಳ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಂಡು ಮತ್ತೊಬ್ಬರಿಗೆ ಪ್ರೇರಣೆಯಾಗುವಂತೆ ಜೀವಿಸಬೇಕು. ಅಂತಹ ಬದುಕು ನೀಡುವ ಖುಷಿಗೆ ಮಿತಿ ಇರುವುದಿಲ್ಲ ಎಂದರು.

ವಿಶ್ವದ ಅತಿ ಎತ್ತರದ ಭೂಶಿಖರ ಮೌಂಟ್‌ ಎವರೆಸ್ಟ್‌  ( 8,848.86 ಮೀಟರ್) ಆರೋಹಣ ಮಾಡಿದ ಕರ್ನಾಟಕ ಮೌಂಟೇನೀರಿಂಗ್‌ ಅಸೋಸಿಯೇಷನ್‌ ಸದಸ್ಯರಾದ ಸಂತೋಷ್‌ ದೇವರಾಜಪ್ಪ ಮತ್ತು ಡಾ. ಚಿನ್ಮಯಿ ತ್ರಿಶೂಲಮೂರ್ತಿ ಅವರನ್ನು ಸಹಕಾರ ನಗರದ ವಿವಿಧ ಸಂಘ – ಸಂಸ್ಥೆಗಳ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು.

 ಸಾಹಸದ ಚಟುವಟಿಕೆಗಳಿಗೆ ಕೇವಲ  ದೈಹಿಕ ಸಧೃಡತೆ ಇದ್ದರೆ ಸಾಲದು, ಮಾನಸಿಕ ಸದೃಢತೆಯೂ ಬೇಕು. ಇಚ್ಚಾಶಕ್ತಿಯ ಮುಂದೆ ಯಾವುದೂ ದೊಡ್ಡದಲ್ಲ ಎಂಬುದನ್ನು ಕನ್ನಡಿಗರಾದ ಸಂತೋಷ್‌ ದೇವರಾಜಪ್ಪ ಮತ್ತು ಡಾ. ಚಿನ್ಮಯಿ ತ್ರಿಶೂಲಮೂರ್ತಿ ಸಾಧಿಸಿ ತೋರಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೀವನದಲ್ಲಿ ಸವಾಲುಗಳನ್ನು ತೆಗೆದುಕೊಳ್ಳಬೇಕು. ಪ್ರಕೃತಿಯೊಂದಿಗೆ ಬದುಕಬೇಕು ಎಂಬುದನ್ನು ಈ ಇಬ್ಬರು ಸಾಧಕರು ತಮ್ಮ ಸಾಧನೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರ ಈ ಸಾಧನೆ ನಮ್ಮ ಯುವಶಕ್ತಿಗೆ ಪ್ರೇರೇಪಣೆಯಾಗಬೇಕು ಎಂದು ಆಶಿಸಿದರು.

ಸಾಹಸದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆಯನ್ನು ಗಮನಿಸಿದರೆ ದೇಶದಲ್ಲೇ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಟ್ರೆಕ್ಕಿಂಗ್‌ ಮತ್ತು ಸೈಕ್ಲಿಂಗ್‌ನಲ್ಲಿ ಬೆಂಗಳೂರಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡುತ್ತಿದ್ದೇವೆ. ಸಾಹಸದ ಚಟುವಟಿಕೆಗಳಿಗೆ ಬೆಂಗಳೂರು ಸ್ಪಿರಿಟ್‌ ಅಗುತ್ತಿದೆ ಎಂದು ಹೇಳಿದರು.

ಸಂತೋಷ ದೇವರಾಜಪ್ಪ ಕನ್ನಡಿಗರಷ್ಟೇ ಅಲ್ಲ,  ಅವರು ನನ್ನ ಕ್ಷೇತ್ರದವರು ಎಂಬುದು ನನಗೆ ಇನ್ನೂ ಹೆಮ್ಮೆ. ಹೀಗಾಗಿ ನಾನೇ ಅವರನ್ನು ಗೌರವಿಸಬೇಕು ಎಂಬ ಆಶಯ ವ್ಯಕ್ತಪಡಿಸಿದೆ. ಆದರೆ ಸಹಕಾರ ನಗರದ ಸಂಘ ಸಂಸ್ಥೆಗಳು ಒಟ್ಟಾಗಿ ಕಾರ್ಯಕ್ರಮ ಆಯೋಜನೆ ಮಾಡಿರುವುದು ತಿಳಿದ ನಂತರ ಅವರೊಟ್ಟಿಗೆ ನಾನೂ ಭಾಗಿಯಾದೆ ಎಂದು ಸಚಿವರು ಹೇಳಿದರು.

ಬೆಂಗಳೂರು ಕಾಂಕ್ರೀಟ್‌ ಕಾಡು ಆಗುತ್ತಿದೆ. ನಗರದ ಬದುಕು ಪರಿಸರದಿಂದ ದೂರ ಮಾಡುತ್ತಿದೆ. ಪ್ರಕೃತಿಯೊಂದಿಗೆ ಬದುಕುವುದನ್ನು ಕಲಿಯಬೇಕು. ಮಕ್ಕಳಲ್ಲಿ ಪ್ರಕೃತಿಯೊಂದಿಗೆ ಬದುಕುವ ಹಾಗೂ ಸಾಹಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಗುಣ ಬೆಳೆಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ ಸಂತೋಷ್‌ ದೇವರಾಜಪ್ಪ ಮತ್ತು ಡಾ. ಚಿನ್ಮಯಿ ತ್ರಿಶೂಲಮೂರ್ತಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು . ಸಹಕಾರ ನಗರದ ವೆಲ್‌ಫೇರ್‌ ಅಸೋಸಿಯೇಷನ್‌ ಅಧ್ಯಕ್ಷ ದೇವರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ‌ ತುಳಸಿ ಮದ್ದಿನೇನಿ, ಕರ್ನಾಟಕ ಮೌಂಟೇನೀರಿಂಗ್‌ ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ಕೆ. ಮೆಹತಾ ವೇದಿಕೆಯಲ್ಲಿದ್ದರು. ವಾಣಿಜ್ಯ  ತೆರಿಗೆಗಳ ಅಪರ ಆಯುಕ್ತ ಕೆ.ಸಿ. ವಿರೂಪಾಕ್ಷ ಅವರು ಸಂತೋಷ್‌ ದೇವರಾಜಪ್ಪ ಮತ್ತು ಡಾ. ಚಿನ್ಮಯಿ ಅವರ ಸಾಧನೆಯ ಹಾದಿಯನ್ನು ವಿವರಿಸಿದರು.

ಆಮ್ಲಜನಕ ಖಾಲಿಯಾಯ್ತು:

ಮೌಂಟ್‌ ಎವರೆಸ್ಟ್‌ ಆರೋಹಣ ಮಾಡಬೇಕು ಎಂಬ ಮಹದಾಸೆಯನ್ನೇನೋ ಈಡೇರಿಸಿಕೊಂಡೆವು. ಶಿಖರವನ್ನು ಇಳಿಯಬೇಕು ಎನ್ನುವ ಸಮಯದಲ್ಲಿ ನನ್ನ ಆಮ್ಲಜನಕ ಸಿಲಿಂಡರ್‌ ಖಾಲಿಯಾಯ್ತು.  ಆಗ ನನಗೆ ನಿಜಕ್ಕೂ ಭಯವಾಯ್ತು….. ದೇವರೇ ಎಂದು ಪ್ರಾರ್ಥಿಸಿದೆ….ಮೌಂಟ್‌ ಎವರೆಸ್ಟ್‌ ಶಿಖರ ಆರೋಹಣದ ಅನುಭವವನ್ನು ಹಂಚಿಕೊಳ್ಳುವ ವೇಳೆ ಈ ಸಂದರ್ಭವನ್ನು ನೆನೆದ ಸಂತೋಷ್‌ ದೇವರಾಜಪ್ಪ ಅವರು ಕೆಲ ಕ್ಷಣ ಭಾವುಕರಾದರು.ನನ್ನ ಜೊತೆಗಿದ್ದ ಶೆರ್ಪಾ  ಅವರಿಗೆ ಆಮ್ಲಜನಕ ಖಾಲಿಯಾದ ವಿಷಯ ತಿಳಿಸಿದೆ. ಅವರು ಈಗ ಏನೂ ಮಾಡಲು ಸಾಧ್ಯವಿಲ್ಲ. ಮತ್ತೊಂದು ಸಿಲಿಂಡರ್‌ ಇರುವ ಸ್ಥಳಕ್ಕೆ ಇದೇ ಸ್ಥಿತಿಯಲ್ಲಿ ಹೋಗುವುದು ಅನಿವಾರ್ಯ ಎಂದು ಪರಿಸ್ಥಿತಿ ವಿವರಿಸಿದರು.

ಆಮ್ಲಜನಕದ ಸಪೋರ್ಟ್‌ ಇಲ್ಲದೆ ಹೇಗೋ ಮತ್ತೊಂದು ಸಿಲಿಂಡರ್‌ ಇರುವ ಸ್ಥಳ ತಲುಪಿದ್ದಾಯ್ತು. ತಕ್ಷಣ ಸಿಲಿಂಡರ್‌ ಹಾಕಿಕೊಂಡೆ. ಅಷ್ಟರಲ್ಲಿ ನನ್ನ ದೇಹದಲ್ಲಿ  ಆಮ್ಲಜನಕ ಕೊರತೆಯಿಂದ ಬದಲಾವಣೆಗಳು ಕಾಣಿಸತೊಡಗಿದ್ದವು.  ಸಿಲಿಂಡರ್‌ ಹಾಕಿಕೊಳ್ಳುತ್ತಿದ್ದಂತೆ ಹೋದ ಜೀವ ಬಂದಂತೆ ಆಯಿತು ಎಂದು ಸ್ಮರಿಸಿದರು.

ಆಕ್ಷಿಜನ್‌ ಹಾಕಿಕೊಂಡ ನಂತರ ದೇಹದಲ್ಲಿ ಬದಲಾವಣೆ ನನಗೇ ಗೋಚರಿಸಿತು. ಒಮ್ಮೆ ಕುಟುಂಬದ ಸದಸ್ಯರು, ಸ್ನೇಹಿತರನ್ನು ನೆನಪು ಮಾಡಿಕೊಂಡೆ. ಎಲ್ಲ ನೆನಪುಗಳು ಬರತೊಡಗಿದವು. ಆಗ ಸದ್ಯ ಏನೂ ಆಗಿಲ್ಲ ಎಂದು ಸಮಾಧಾನ ಮಾಡಿಕೊಂಡೆ ಎಂದರು.

ಇಂತಹ ಸಾಹಸದ ಚಟುವಟಿಕೆಗಳಲ್ಲಿ ಪ್ರಾಣಾಪಾಯದ ರಿಸ್ಕ್‌ ಸಹಜ. ಆದರೆ ನಾವು ಎಚ್ಚರಿಕೆಯಿಂದ ಇರಬೇಕು. ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ದುರ್ಗಮ ಹಾದಿ

ಕರ್ನಾಟಕ ಮೌಂಟೇನೀರಿಂಗ್‌ ಅಸೋಸಿಯೇಷನ್‌ನ 60ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನನ್ನನ್ನು ಮತ್ತು ಸಂತೋಷ್‌ ಅವರನ್ನು ಮೌಂಟ್‌ ಎವರೆಸ್ಟ್‌ ಆರೋಹಣಕ್ಕೆ ಆಯ್ಕೆ ಮಾಡಿದಾಗ ಇದು ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿ ಮೂಡಿತ್ತು. ಆದರೆ ಎಲ್ಲರಿಂದ ಸಿಕ್ಕ ಬೆಂಬಲ ಮತ್ತು ಪ್ರೋತ್ಸಾಹ ಗುರಿ ತಲುಪುವಂತೆ ಮಾಡಿದೆ ಎಂದು ಡಾ. ಚಿನ್ಮಯಿ ತ್ರಿಶೂಲಮೂರ್ತಿ ಹೇಳಿದರು.48 ಡಿಗ್ರಿ ಸೆಲ್ಸಿಯಸ್‌ನಲ್ಲಿ ಆರೋಹಣ ಮಾಡುವುದು ಸುಲಭವಲ್ಲ. ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಅಪಾಯ ತಪ್ಪಿದ್ದಲ್ಲ. ಪ್ರತಿಕೂಲ ಹವಾಮಾನದಲ್ಲಿ ಸಾಧನೆ ಮಾಡುವುದು ಸುಲಭವಲ್ಲ. ಮಾನಸಿಕ ಸದೃಢತೆಯೂ ಬೇಕು ಎಂದರು.


Share this with Friends

Related Post