ಬೆಂಗಳೂರು:ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಯುವಜನತೆಗೆ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮಿಕ್ಕುಳಿದ (ಉಳಿದ ಮೂಲ) ವೃಂದದಲ್ಲಿ ಖಾಲಿ ಇರುವ ಒಟ್ಟು 3,395 ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕೆಇಎ ಮೂಲಕ ಒಎಂಆರ್ ಪರೀಕ್ಷೆ:
ಈ ನೇಮಕಾತಿಯ ಪ್ರಮುಖ ಪ್ರಕ್ರಿಯೆಯಾದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಡೆಸಲಿದೆ. ಪರೀಕ್ಷೆಗಳು ಆಫ್‌ಲೈನ್-ಒಎಂಆರ್ (Offline-OMR) ಮಾದರಿಯಲ್ಲಿ ಜರುಗಲಿವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಹುದ್ದೆಗಳ ವರ್ಗೀಕರಣ ವಿವರ:
ಒಟ್ಟು 3,395 ಹುದ್ದೆಗಳಲ್ಲಿ ಅಭ್ಯರ್ಥಿಗಳ ವರ್ಗೀಕರಣ ಹೀಗಿದೆ:
ಪುರುಷ ಅಭ್ಯರ್ಥಿಗಳು: 2,266 ಹುದ್ದೆಗಳು
ಮಹಿಳಾ ಅಭ್ಯರ್ಥಿಗಳು: 755 ಹುದ್ದೆಗಳು
ಸೇವಾನಿರತ ಪುರುಷರು: 257 ಹುದ್ದೆಗಳು
ಸೇವಾನಿರತ ಮಹಿಳೆಯರು: 82 ಹುದ್ದೆಗಳು
ತೃತೀಯ ಲಿಂಗಿ ಅಭ್ಯರ್ಥಿಗಳು: 35 ಹುದ್ದೆಗಳು
ವೇತನ ಶ್ರೇಣಿ ಎಷ್ಟು?:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹37,500 ರಿಂದ ₹76,100 ರವರೆಗಿನ ಆಕರ್ಷಕ ವೇತನ ಶ್ರೇಣಿ ಅನ್ವಯವಾಗಲಿದ್ದು, ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸೌಲಭ್ಯ ದೊರೆಯಲಿದೆ.
ವಿದ್ಯಾರ್ಹತೆ ಮತ್ತು ವಯೋಮಿತಿ ಸಡಿಲಿಕೆ:
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಪಿಯುಸಿ (PUC) ಅಥವಾ ಸಿಬಿಎಸ್ಇ, ಐಎಸ್ಸಿ, ಎನ್ಐಓಎಸ್ ಹಾಗೂ ಮೂರು ವರ್ಷಗಳ ಡಿಪ್ಲೊಮಾ ಸೇರಿದಂತೆ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
ವಿಶೇಷವೆಂದರೆ, ಸರ್ಕಾರವು ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಭರ್ಜರಿ ಸಡಿಲಿಕೆ ನೀಡಿದೆ. ಇದರನ್ವಯ ಗರಿಷ್ಠ ವಯೋಮಿತಿ ಹೀಗಿದೆ:
ಸಾಮಾನ್ಯ ಅರ್ಹತೆ (General): 33 ವರ್ಷಗಳು
SC/ST ಮತ್ತು ಹಿಂದುಳಿದ ವರ್ಗಗಳು (OBC): 35 ವರ್ಷಗಳು
ಬುಡಕಟ್ಟು ಅಭ್ಯರ್ಥಿಗಳು: 38 ವರ್ಷಗಳು
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜೂನ್ 08, 2026 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 03, 2026 ಕೊನೆಯ ದಿನಾಂಕವಾಗಿರುತ್ತದೆ. ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಲಿಂಕ್ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕಿದ್ದು, ಹೆಚ್ಚಿನ ಮಾಹಿತಿ ಹಾಗೂ ತಾಂತ್ರಿಕ ನೆರವಿಗಾಗಿ ಪ್ರಾಧಿಕಾರದ ಮಾಹಿತಿ ಕೇಂದ್ರದ ದೂರವಾಣಿ ಸಂಖ್ಯೆ: 080-23460460 ಅನ್ನು ಸಂಪರ್ಕಿಸಬಹುದು ಅಥವಾ ಅಧಿಕೃತ ‘X’ ಖಾತೆ @KEA_KARNATAKA ವೀಕ್ಷಿಸಬಹುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

