Sat. Jul 18th, 2026

ಯುಜಿನೀಟ್: ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ

Share this with Friends

ಬೆಂಗಳೂರು:ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ನೀಟ್ ಬರೆದು, ಅರ್ಹರಾಗಿರುವ ಹಾಗೂ ಯುಜಿಸಿಇಟಿಗೆ ಇದುವರೆಗೂ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳಿಗೆ ಜುಲೈ 24ರವರೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಂಕ್ ಬಿಡುಗಡೆ ಮಾಡಿದೆ.

ಯುಜಿ ಸಿಇಟಿಗೆ ಅರ್ಜಿ ಸಲ್ಲಿಸಿ, ನೀಟ್ ನಲ್ಲಿ ಅರ್ಹರಾಗಿರುವ ಅಭ್ಯರ್ಥಿಗಳಿಗೆ ನೀಟ್ ರೋಲ್ ನಂಬರ್ ಅನ್ನು ಸಿಇಟಿ ಅರ್ಜಿ ಜತೆ ಜೋಡಿಸಲು ಸದ್ಯದಲ್ಲೇ ಲಿಂಕ್ ಬಿಡುಗಡೆ ಮಾಡಲಾಗುವುದು. ಆದರೆ ಇದುವರೆಗೂ ಯಾರು ಅರ್ಜಿಯನ್ನೇ ಸಲ್ಲಿಸಿಲ್ಲವೊ ಅಂತಹವರು ಹೊಸದಾಗಿ ಅರ್ಜಿ ಸಲ್ಲಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ಕೋರ್ಸ್ ಗಳ ಪ್ರವೇಶಕ್ಕೆ ನೀಟ್ ಪರೀಕ್ಷೆಯ ರಾಂಕ್ ಪರಿಗಣಿಸಿ ಸೀಟು ಹಂಚಿಕೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಹೊಸದಾಗಿ ಅರ್ಜಿ ಸಲ್ಲಿಸಿರುವ ಯಾರೆಲ್ಲ ದಾಖಲೆ ಪರಿಶೀಲನೆಗೆ ಬರಬೇಕು ಎನ್ನುವುದರ ಮಾಹಿತಿಯನ್ನು ಸದ್ಯದಲ್ಲಿಯೇ ವೆಬ್‌ ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಕರ್ನಾಟಕೇತರ ಅಭ್ಯರ್ಥಿಗಳು:

ಕರ್ನಾಟಕೇತರ ಅಭ್ಯರ್ಥಿಗಳು ಕೂಡ ಕೆಇಎ ಪೋರ್ಟಲ್ ನಲ್ಲಿ ನೋಂದಣಿ ಮಾಡಿ, ಶುಲ್ಕ ಪಾವತಿಸಬೇಕು. 12ನೇ ತರಗತಿಯ ಅಂಕಗಳನ್ನು ದಾಖಲಿಸಬೇಕು. ಅಂಕಪಟ್ಟಿಯನ್ನು ಅಪ್ ಲೋಡ್ ಮಾಡುವುದಕ್ಕೂ ಅವಕಾಶ ನೀಡಲಾಗಿದೆ. ಇವರು ದಾಖಲೆ ಪರಿಶೀಲನೆಗೆ ಬರುವ ಅಗತ್ಯ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಓಸಿಐ, ಪಿಐಓ, ಎನ್ ಆರ್ ಐ ಮತ್ತು ವಿದೇಶಿ ಅಭ್ಯರ್ಥಿಗಳು, ಕರ್ನಾಟಕೇತರ ಅಭ್ಯರ್ಥಿಗಳು ಧಾರ್ಮಿಕ ಅಲ್ಪಸಂಖ್ಯಾತ ಅಥವಾ ಎನ್ ಆರ್ ಐ ವಾರ್ಡ್ ಸೀಟುಗಳನ್ನು ಅಥವಾ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ನಿರ್ದಿಷ್ಟ ಸೀಟುಗಳನ್ನು ಪಡೆಯಲು ಅರ್ಹರಿದ್ದಲ್ಲಿ ಅಂತಹ ಅಭ್ಯರ್ಥಿಗಳು ಮಾತ್ರ ಸ್ಲಾಟ್ ಬುಕ್ ಮಾಡಿಕೊಂಡು‌ ನಿಗದಿತ ದಿನಾಂಕಗಳಂದು ದಾಖಲೆ ಪರಿಶೀಲನೆಗೆ ಬರಬೇಕು. ದಿನಾಂಕಗಳನ್ನು ನಂತರ ತಿಳಿಸಲಾಗುವುದು ಎಂದು‌ ಅವರು ಹೇಳಿದ್ದಾರೆ.

ಡಿಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ ಜು. 21ರಿಂದ ಆರಂಭ:

ಎಂಜಿನಿಯರಿಂಗ್ 3ನೇ ಸೆಮಿಸ್ಟರ್ ಗೆ ನೇರ ಪ್ರವೇಶ ಕಲ್ಪಿಸುವ ಡಿಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿ ಪ್ರಕಟಿಸಿದ್ದು, ಜುಲೈ 21ರಿಂದ 24ರವರೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಪ್ರಸನ್ನ ಅವರು ತಿಳಿಸಿದ್ದಾರೆ.

ಜುಲೈ 24ರಂದು ಸಂಜೆ 6 ಗಂಟೆಗೆ ಸೀಟು ಹಂಚಿಕೆಯ ಅಣಕು ಫಲಿತಾಂಶ ಪ್ರಕಟಿಸಲಾಗುತ್ತದೆ. ನಂತರ ಜುಲೈ 27ರವರೆಗೆ ಆಪ್ಷನ್ಸ್ ಬದಲಿಸಲು/ತೆಗೆದುಹಾಕಲು/ಸೇರಿಸಲು ಅವಕಾಶ ಇರುತ್ತದೆ. ನಂತರ ಜುಲೈ 27ರಂದು ಸಂಜೆ 6ಗಂಟೆಗೆ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು ಎಂದು‌ ಅವರು ಹೇಳಿದರು.

ಜುಲೈ 28ರಿಂದ 31ರವರೆಗೆ ಚಾಯ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ. ಚಾಯ್ಸ್- 1 ಮತ್ತು ಚಾಯ್ಸ್ -2 ದಾಖಲಿಸಿದವರು ಜುಲೈ 28ರಿಂದ ಆಗಸ್ಟ್ 1ರವರೆಗೆ ಚಲನ್ ಡೌನ್‌ಲೋಡ್ ಮಾಡುವುದು. ಚಾಯ್ಸ್- 1 ದಾಖಲಿಸಿದವರು ಶುಲ್ಕ ಪಾವತಿಸಿ ಆಗಸ್ಟ್ 4ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.

ಅರ್ಕಿಟೆಕ್ಚರ್ ಕೋರ್ಸ್ ಪ್ರವೇಶ:

ಡಿಪ್ಲೊಮಾ ಅಭ್ಯರ್ಥಿಗಳು, ಆರ್ಕಿಟೆಕ್ಚರ್ ಕೋರ್ಸ್ ಪ್ರವೇಶಕ್ಕಾಗಿ ನಾಟಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಪಟ್ಟಿಯನ್ನು ಜುಲೈ 20ರೊಳಗೆ ಕೆಇಎ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ.

ಡಿಸಿಇಟಿ ಅರ್ಜಿ ಪ್ರತಿ, ನಾಟಾ ಅಂಕ ಪಟ್ಟಿ, ಡಿಪ್ಲೊಮಾ ಅಂಕಪಟ್ಟಿ, ಅರ್ಜಿಯಲ್ಲಿ ಕ್ಲೇಮ್ ಮಾಡಿರುವ ಪ್ರಕಾರ ವ್ಯಾಸಂಗ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳ ಸಮೇತ ಬಂದು ಕೆಇಎ ಕಚೇರಿಯಲ್ಲಿ ಸಲ್ಲಿಸಬೇಕು ಎಂದು ಪ್ರಸನ್ನ ಅವರು ಸೂಚಿಸಿದ್ದಾರೆ.


Share this with Friends

Related Post