ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುರಿತು ಕಾಂಗ್ರೆಸ್ ನಾಯಕರು ಕೃತಕ ಕಾಳಜಿ ತೋರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ಯುವಿಜಯೇಂದ್ರ ತೀವ್ರವಾಗಿ ಆಕ್ಷೇಪಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಕೆಪಿಸಿಸಿ ಮುಖಂಡರ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಮೂಲಕ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ದೇಶದ ಅತ್ಯುನ್ನತ ಪ್ರಧಾನ ಮಂತ್ರಿ ಸ್ಥಾನಕ್ಕೇರಿ ಹೆಮ್ಮೆಯ ಕನ್ನಡಿಗ ಎನಿಸಿಕೊಂಡಿದ್ದ ಎಚ್.ಡಿ. ದೇವೇಗೌಡರನ್ನು ಆ ಹುದ್ದೆಯಿಂದ ಕೆಳಗಿಳಿಸಿದ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ ಎಂಬುದನ್ನು ಆ ಪಕ್ಷದ ನಾಯಕರು ಮರೆತಂತಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ. ದೇವೇಗೌಡರನ್ನು ಅವರ ಇಡೀ ರಾಜಕೀಯ ಜೀವನದುದ್ದಕ್ಕೂ ಕಾಡಿದ ಮತ್ತು ಅವರ ಪಕ್ಷವನ್ನು ಇಬ್ಬಾಗ ಮಾಡಲು ಸಂಚು ರೂಪಿಸಿದ್ದು ಇದೇ ಕಾಂಗ್ರೆಸ್ ಎಂದು ಅವರು ಆರೋಪಿಸಿದ್ದಾರೆ. ಇಷ್ಟೆಲ್ಲಾ ಕೊಳಕು ರಾಜಕಾರಣ ಮಾಡಿ, ಈಗ ಅವರ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಹೇಳಿದ್ದಾರೆ.
ಬಿಜೆಪಿಯಲ್ಲಿ ಗೌರವಯುತ ಸ್ಥಾನ:
ಭಾರತೀಯ ಜನತಾ ಪಾರ್ಟಿಯು ದೇವೇಗೌಡರನ್ನು ಮತ್ತು ಅವರ ಹಿರಿತನವನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಾತ್ರ ದೇಶದ ಅಭಿವೃದ್ಧಿ ಮತ್ತು ಸಮಗ್ರತೆ ಸಾಧ್ಯ ಎಂಬ ದೃಢ ನಂಬಿಕೆಯಿಂದ ದೇವೇಗೌಡರು ಎನ್‌ಡಿಎ (NDA) ಒಕ್ಕೂಟವನ್ನು ಬೆಂಬಲಿಸಿ, ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಳಿಸಿದ್ದಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್ ನಾಯಕರು, ದೇವೇಗೌಡರ ಹೆಸರನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡು ಎಂದು ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.
ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಸಂಸತ್ತಿನಲ್ಲಿ ದೇವೇಗೌಡರ ಸುದೀರ್ಘ ಸೇವೆ ಮತ್ತು ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ರಾಷ್ಟ್ರವನ್ನು ಮುನ್ನಡೆಸಲು ಅವರ ಮಾರ್ಗದರ್ಶನ ಅಗತ್ಯ ಎಂದು ಭಾವುಕರಾಗಿ ನುಡಿದಿದ್ದಾರೆ. ಹೀಗಿರುವಾಗ ಉಭಯ ಪಕ್ಷಗಳ ನಡುವಿನ ಉತ್ತಮ ಬಾಂಧವ್ಯಕ್ಕೆ ಹುಳಿ ಹಿಂಡಲು ಯತ್ನಿಸುತ್ತಿರುವ ಕಾಂಗ್ರೆಸ್ಸಿಗರ ವಿಕೃತ ನಡಾವಳಿಯನ್ನು ಅರ್ಥ ಮಾಡಿಕೊಳ್ಳದಷ್ಟು ಕರ್ನಾಟಕದ ಜನತೆ ಮುಗ್ಧರಲ್ಲ ಎಂದು ಬಿ.ವೈ.ವಿಜಯೇಂದ್ರ ಎಚ್ಚರಿಸಿದ್ದಾರೆ.

