Tue. Jun 9th, 2026

ಕಾಂಗ್ರೆಸ್ ಮುಖಂಡ ಸೂರಜ್ ಹೆಗ್ಡೆ ನಿಧನ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

Share this with Friends

ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ಸಂಘಟಕ, ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾಗಿದ್ದ ಸೂರಜ್ ಹೆಗ್ಡೆ ಅವರ ಅಂತ್ಯಕ್ರಿಯೆಯು ಮಂಗಳವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಭಾನುವಾರ ರಾತ್ರಿ ಸಂಭವಿಸಿದ ಭೀಕರ ಹೃದಯಾಘಾತದಿಂದ ನಿಧನರಾಗಿದ್ದ ಸೂರಜ್ ಹೆಗ್ಡೆ ಅವರ ಪಾರ್ಥಿವ ಶರೀರಕ್ಕೆ ಸಾರ್ವಜನಿಕರು ಹಾಗೂ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಮೃತರ ಬಿಇಎಲ್ ರಸ್ತೆಯ ನಿವಾಸಕ್ಕೆ ಭೇಟಿ ನೀಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಪ್ರಮುಖರು ಪುಷ್ಪಗುಚ್ಛ ಇರಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಗಣ್ಯರ ಸಾಂತ್ವನ:

ರಾಹುಲ್ ಗಾಂಧಿ ಮತ್ತು ರಾಜ್ಯದ ಹಿರಿಯ ನಾಯಕರು ಸೂರಜ್ ಹೆಗ್ಡೆ ಅವರ ಪತ್ನಿ ಶಿಲ್ಪಾ ಹಾಗೂ ಪುತ್ರರಾದ ಸಮೃಧ್ ಮತ್ತು ವಿಶೃತ್ ಅವರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು. ಪಕ್ಷವು ಸದಾ ಕುಟುಂಬದ ಬೆಂಬಲಕ್ಕೆ ಇರಲಿದೆ ಎಂದು ನಾಯಕರು ಭರವಸೆ ನೀಡಿದರು.

ಸರ್ಕಾರಿ ಗೌರವ ಸಲ್ಲಿಕೆ:

ಅಂತಿಮ ವಿಧಿವಿಧಾನಗಳ ಅಂಗವಾಗಿ ಸೂರಜ್ ಹೆಗ್ಡೆ ಅವರ ನಿವಾಸದ ಬಳಿ ಪೊಲೀಸ್ ಬಂದೂಕು ಪಡೆಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವ ವಂದನೆ ಸಲ್ಲಿಸಲಾಯಿತು. ಇದೇ ವೇಳೆ ನಿಯಮಾನುಸಾರ ಪಾರ್ಥಿವ ಶರೀರದ ಮೇಲಿದ್ದ ರಾಷ್ಟ್ರಧ್ವಜವನ್ನು ಮೃತರ ಪತ್ನಿ ಶಿಲ್ಪಾ ಅವರಿಗೆ ಹಸ್ತಾಂತರಿಸಲಾಯಿತು. ಧ್ವಜ ಹಸ್ತಾಂತರಿಸಿ ತೀವ್ರ ಭಾವುಕರಾದ ನಾಯಕರು, ಇಡೀ ಪಕ್ಷವು ಕುಟುಂಬದ ದುಃಖದಲ್ಲಿ ಭಾಗಿಯಾಗಿದೆ ಎಂದರು.

ಇದಕ್ಕೂ ಮುನ್ನ, ಸೂರಜ್ ಹೆಗ್ಡೆ ಅವರ ಅಂತಿಮ ದರ್ಶನ ಪಡೆಯಲು ವಿಶೇಷ ವಿಮಾನದ ಮೂಲಕ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡು, ಬಳಿಕ ಬೀಳ್ಕೊಟ್ಟರು.

 


Share this with Friends

Related Post