Sat. Jul 11th, 2026

ಚಿತ್ರರಂಗದ ಗಾನಕೋಗಿಲೆ ಇನ್ನಿಲ್ಲ: ಖ್ಯಾತ ಹಿರಿಯ ಗಾಯಕಿ ಎಸ್. ಜಾನಕಿ ವಿಧಿವಶ; ಮೈಸೂರಿನಲ್ಲಿ ಕೊನೆಯುಸಿರು!

Share this with Friends

ಮೈಸೂರು: ಭಾರತೀಯ ಸಿನಿಕಂಠದ ಅತ್ಯಂತ ಮಧುರ ಧ್ವನಿ, ಬಹುಭಾಷಾ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಶನಿವಾರ ಮೈಸೂರಿನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಹೃದಹಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯಕೀಯ ಮೂಲಗಳು ಖಚಿತಪಡಿಸಿವೆ. ಅವರ ನಿಧನದ ವಾರ್ತೆಯು ಇಡೀ ಭಾರತೀಯ ಚಿತ್ರರಂಗ ಹಾಗೂ ಕೋಟ್ಯಂತರ ಸಂಗೀತ ಪ್ರೇಮಿಗಳಲ್ಲಿ ತೀವ್ರ ಆಘಾತ ಮತ್ತು ದುಃಖವನ್ನು ಉಂಟುಮಾಡಿದೆ.

ಆರು ದಶಕಗಳ ಸುದೀರ್ಘ ಸಂಗೀತ ಪಯಣ

1938 ರ ಏಪ್ರಿಲ್ 23 ರಂದು ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದ ಎಸ್. ಜಾನಕಿ ಅವರು ತಮ್ಮ ಆರು ದಶಕಗಳಿಗೂ ಹೆಚ್ಚು ಕಾಲದ ಸುದೀರ್ಘ ವೃತ್ತಿಜೀವನದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಹದಿನಾರಕ್ಕೂ ಹೆಚ್ಚು ಭಾಷೆಗಳಲ್ಲಿ ಹತ್ತಾರು ಸಾವಿರ ಮಧುರ ಗೀತೆಗಳನ್ನು ಹಾಡಿದ್ದಾರೆ. ತಮ್ಮ ಅದ್ಭುತ ಗಾಯನಕ್ಕಾಗಿ ಹಲವು ರಾಷ್ಟ್ರ ಪ್ರಶಸ್ತಿಗಳು ಹಾಗೂ ವಿವಿಧ ರಾಜ್ಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಅವರು ದಕ್ಷಿಣ ಭಾರತದ ಚಿತ್ರರಂಗದ ಸುವರ್ಣ ಯುಗದ ಧ್ವನಿಯಾಗಿದ್ದರು.

ಕನ್ನಡ ಚಿತ್ರರಂಗದೊಂದಿಗೆ ಅವಿನಾಭಾವ ಬಾಂಧವ್ಯ

ಕನ್ನಡ ಚಿತ್ರರಂಗದೊಂದಿಗೆ ಜಾನಕಿಯವರ ಒಡನಾಟ ಅತ್ಯಂತ ಆಳವಾಗಿತ್ತು. ಕನ್ನಡದ ಸಾರ್ವಕಾಲಿಕ ಶ್ರೇಷ್ಠ ನಟರ ಚಿತ್ರಗಳಿಗೆ ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಕನ್ನಡಿಗರ ಮನೆಮನಗಳಲ್ಲಿ ಜೀವಂತವಾಗಿವೆ. ಅದರಲ್ಲೂ ವಿಶೇಷವಾಗಿ ಗಾನಗಂಧರ್ವರೊಂದಿಗೆ ಜಾನಕಿಯವರು ಹಾಡಿದ ಯುಗಳ ಗೀತೆಗಳು ಕನ್ನಡ ಚಿತ್ರರಂಗದ ಮೈಲಿಗಲ್ಲುಗಳಾಗಿವೆ. ಮಗನ ಅಗಲಿಕೆಯ ತೀವ್ರ ದುಃಖದಲ್ಲಿದ್ದ ಜಾನಕಿಯವರ ಆರೋಗ್ಯವು ಕಳೆದ ಕೆಲವು ತಿಂಗಳುಗಳಿಂದ ಮತ್ತಷ್ಟು ಕ್ಷೀಣಿಸುತ್ತಾ ಬಂದಿತ್ತು ಎಂದು ಆಪ್ತ ಮೂಲಗಳು ತಿಳಿಸಿವೆ.

ಗಾನಕೋಗಿಲೆಯ ನಿಧನಕ್ಕೆ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಹಾಗೂ ಜಗತ್ತಿನಾದ್ಯಂತ ಇರುವ ಅವರ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸುತ್ತಿದ್ದಾರೆ.

 


Share this with Friends

Related Post