Sun. Jul 12th, 2026

ಬೆಂಗಳೂರಿಗೆ ಮಂಜೂರಾದ ಇ-ಬಸ್ ಜಾರಿಗೆ ವಿಳಂಬ: ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ತೀವ್ರ ಆಕ್ರೋಶ

JDS
Share this with Friends

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಧಾನಮಂತ್ರಿ ಇ-ಡ್ರೈವ್’ (PM E-Drive) ಯೋಜನೆಯಡಿ ಬೆಂಗಳೂರು ನಗರಕ್ಕೆ ಮಂಜೂರಾಗಿರುವ ಎಲೆಕ್ಟ್ರಿಕ್ ಬಸ್‌ಗಳ ಇಲಾಖಾ ಅನುಷ್ಠಾನಕ್ಕೆ ರಾಜ್ಯ ಸರ್ಕಾರವು ಅನುಮೋದನೆ ನೀಡದೆ ವಿಳಂಬ ಮಾಡುತ್ತಿರುವುದನ್ನು ಜೆಡಿಎಸ್ ತೀವ್ರವಾಗಿ ಖಂಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸರಣಿ ವಾಗ್ದಾಳಿ ನಡೆಸಿರುವ ಜೆಡಿಎಸ್, ಸರ್ಕಾರದ ನಿರಾಸಕ್ತಿಯನ್ನು ತರಾಟೆಗೆ ತೆಗೆದುಕೊಂಡಿದೆ.

ರೂ. 1,505 ಕೋಟಿ ಸಹಾಯಧನ ಹಸ್ತಾಂತರ:

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಪ್ರಯಾಣಿಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ ವತಿಯಿಂದ ಒಟ್ಟು 4,500 ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಲಾಗಿದೆ. ಇದಕ್ಕೆ ಪೂರಕವಾಗಿ 1,505 ಕೋಟಿ ರೂ. ಭಾರಿ ಆರ್ಥಿಕ ಸಹಾಯಧನವನ್ನೂ ಕೇಂದ್ರ ಘೋಷಿಸಿದೆ. ಆದರೆ ಈ ಯೋಜನೆಗೆ ರಾಜ್ಯ ಸಚಿವ ಸಂಪುಟದಲ್ಲಿ (ಕ್ಯಾಬಿನೆಟ್) ಅನುಮೋದನೆ ನೀಡದೆ ಫೈಲ್ ಅನ್ನು ಧೂಳು ಹಿಡಿಯುವಂತೆ ಮಾಡಲಾಗಿದೆ ಎಂದು ಜೆಡಿಎಸ್ ದೂರಿದೆ.

ಅಭಿವೃದ್ಧಿಗೆ ಅಡ್ಡಗಾಲು ಆರೋಪ:

ದೇಶದ ಇತರ ಪ್ರಮುಖ ನಗರಗಳಾದ ಹೈದರಾಬಾದ್, ಸೂರತ್ ಮತ್ತು ಅಹಮದಾಬಾದ್ ಈಗಾಗಲೇ ಈ ಯೋಜನೆಯಡಿ ಕಾರ್ಯಾದೇಶ ನೀಡಡಿ ಮುನ್ನುಗ್ಗುತ್ತಿವೆ. ಆದರೆ ರಾಜ್ಯ ಸರ್ಕಾರವು ರಾಜಕೀಯ ಕಾರಣಗಳಿಗಾಗಿ ಈ ಯೋಜನೆಗೆ ಅಡ್ಡಗಾಲು ಹಾಕುತ್ತಿದೆ. ಕೇಂದ್ರ ಸರ್ಕಾರ ನೀಡುವ ಬೃಹತ್ ಸಬ್ಸಿಡಿಯನ್ನು ಬಳಸಿಕೊಳ್ಳದ ಸರ್ಕಾರದ ಆಡಳಿತ ವೈಫಲ್ಯದಿಂದಾಗಿ, ಈ ಬಸ್‌ಗಳು ಬೇರೆ ರಾಜ್ಯಗಳ ಪಾಲಾದರೆ ಬೆಂಗಳೂರಿನ ಜನತೆ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

ಸರ್ಕಾರದ ಸಮರ್ಥನೆ:

ಮತ್ತೊಂದೆಡೆ, ಕೇಂದ್ರ ಸರ್ಕಾರದ ಕಠಿಣ ನಿಯಮಾವಳಿಗಳಿಂದಾಗಿ ರಾಜ್ಯ ಸಾರಿಗೆ ಸಂಸ್ಥೆಗೆ ವಾರ್ಷಿಕವಾಗಿ ಭಾರಿ ಆರ್ಥಿಕ ನಷ್ಟ ಉಂಟಾಗುವ ಭೀತಿ ಇದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ. ಕೇಂದ್ರದ ಸಬ್ಸಿಡಿಯು ಈ ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲದ ಕಾರಣ ಒಪ್ಪಿಗೆ ನೀಡಲು ವಿಳಂಬವಾಗುತ್ತಿದೆ ಎಂದು ಸರ್ಕಾರದ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ. ಆದರೆ ಸಾರ್ವಜನಿಕ ಸಾರಿಗೆಯ ಹಿತದೃಷ್ಟಿಯಿಂದ ಈ ಯೋಜನೆಯನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.

 

 


Share this with Friends

Related Post