Mon. Jul 20th, 2026

ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ಸಾಂಗೋಪಾಂಗವಾಗಿ ನೆರವೇರಿದ ಚೆನ್ನಮ್ಮ ದೇವೇಗೌಡರ ಅಂತ್ಯಕ್ರಿಯೆ: ದೊಡ್ಡಗೌಡರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದ ಮುಖ್ಯಮಂತ್ರಿ

Share this with Friends

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ದೇವೇಗೌಡ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವು ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ವಯೋಸಹಜ ಅನಾರೋಗ್ಯದಿಂದ ಶನಿವಾರ ಬೆಂಗಳೂರಿನಲ್ಲಿ ವಿಧಿವಶರಾಗಿದ್ದ ದೊಡ್ಡಮನೆಯ ಹಿರಿಯ ಜೀವಕ್ಕೆ ಅಂತಿಮ ನಮನ ಸಲ್ಲಿಸಲು ರಾಜ್ಯದ ವಿವಿಧ ಮೂಲೆಗಳಿಂದ ಪಕ್ಷಾತೀತವಾಗಿ ಗಣ್ಯರು ಹಾಗೂ ಸಾವಿರಾರು ಸಾರ್ವಜನಿಕರು ಹರಿದುಬಂದಿದ್ದರು.

ರಾಜ್ಯ ಸರ್ಕಾರದ ವತಿಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಈ ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖುದ್ದಾಗಿ ಪಾಲ್ಗೊಂಡು ಅಗಲಿದ ಚೇತನಕ್ಕೆ ಅಂತಿಮ ಶ್ರದ್ಧಾಂಜಲಿ ಅರ್ಪಿಸಿದರು.

ತ್ರಿವರ್ಣ ಧ್ವಜ ಹಸ್ತಾಂತರಿಸಿದ ಸಿಎಂ:

ಭಾವನಾತ್ಮಕ ಕ್ಷಣ: ಧಾರ್ಮಿಕ ವಿಧಿವಿಧಾನಗಳಿಗೆ ಮುನ್ನ ಪಾರ್ಥಿವ ಶರೀರದ ಮೇಲಿದ್ದ ಗೌರವದ ಸಂಕೇತವಾದ ರಾಷ್ಟ್ರಧ್ವಜವನ್ನು ಪೊಲೀಸರು ಸಾಂಪ್ರದಾಯಿಕವಾಗಿ ನಿಯಮಾನುಸಾರ ತೆರವುಗೊಳಿಸಿದರು. ತದನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆ ತ್ರಿವರ್ಣ ಧ್ವಜವನ್ನು ಅತ್ಯಂತ ಭಾವುಕರಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಹಸ್ತಾಂತರಿಸಿದರು.

ದೊಡ್ಡಗೌಡರಿಗೆ ಸಾಂತ್ವನ: ಧ್ವಜ ಹಸ್ತಾಂತರಿಸಿದ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಅವರು ದೊಡ್ಡಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಸಾಂತ್ವನ ನುಡಿದರು. ಆ ಬಳಿಕ ಆ ರಾಷ್ಟ್ರಧ್ವಜವನ್ನು ಅವರ ಪುತ್ರ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಹಸ್ತಾಂತರಿಸಲಾಯಿತು.

ಗನ್ ಸಲ್ಯೂಟ್ ಗೌರವ: ಕರ್ನಾಟಕ ರಾಜ್ಯ ಪೊಲೀಸ್ ಪಡೆಯ ಸಶಸ್ತ್ರ ತುಕಡಿಯು ಮೂರು ಸುತ್ತು ಕುಶಾಲತೋಪುಗಳನ್ನು ಗಾಳಿಯಲ್ಲಿ ಸಿಡಿಸುವ ಮೂಲಕ ದಿವಂಗತ ಚೆನ್ನಮ್ಮ ಅವರಿಗೆ ಸಕಲ ಸರ್ಕಾರಿ ವಂದನೆಗಳನ್ನು ಸಲ್ಲಿಸಿತು. ಈ ವೇಳೆ ಪೊಲೀಸ್ ಬ್ಯಾಂಡ್ ವತಿಯಿಂದ ರಾಷ್ಟ್ರಗೀತೆಯನ್ನು ನುಡಿಸಿ ಗೌರವಿಸಲಾಯಿತು.

ಸಂಪ್ರದಾಯದಂತೆ ವಿಧಿವಿಧಾನ: ಕುಟುಂಬದ ಧಾರ್ಮಿಕ ಸಂಪ್ರದಾಯದಂತೆ ಅರ್ಚಕರ ತಂಡದ ಮಾರ್ಗದರ್ಶನದಲ್ಲಿ ಚೆನ್ನಮ್ಮ ಅವರ ಕಿರಿಯ ಪುತ್ರ ಹೆಚ್.ಡಿ. ರಮೇಶ್ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

ದೇವೇಗೌಡರ ಸುದೀರ್ಘ ರಾಜಕೀಯ ಏಳುಬೀಳುಗಳ ಪಯಣದಲ್ಲಿ ಸದಾ ನೆರಳಾಗಿ ನಿಂತಿದ್ದ ಧೀಮಂತ ಮಾತೆಯ ಅಂತ್ಯಕ್ರಿಯೆಯಲ್ಲಿ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್, ಪ್ರಹ್ಲಾದ್ ಜೋಶಿ ಸೇರಿದಂತೆ ನೂರಾರು ರಾಜಕೀಯ ನಾಯಕರು ಪಾಲ್ಗೊಂಡು ಕಂಬನಿ ಮಿಡಿದರು.

 

 


Share this with Friends

Related Post