ಧಾರವಾಡ:ಆಷಾಢ ಏಕಾದಶಿ ಹಬ್ಬದ ಪವಿತ್ರ ಸಂದರ್ಭದಲ್ಲಿ ಮಹಾರಾಷ್ಟ್ರದ ಪಂಡರಪುರ ಶ್ರೀ ವಿಠ್ಠಲನ ದರ್ಶನಕ್ಕೆ ತೆರಳುವ ಭಕ್ತಾದಿಗಳಿಗೆ ನೈರುತ್ಯ ರೈಲ್ವೆಯು ಮಹತ್ವದ ಕೊಡುಗೆಯೊಂದನ್ನು ನೀಡಿದೆ. ಹಬ್ಬದ ದಿನಗಳಲ್ಲಿ ಪ್ರಯಾಣಿಕರ ಭಾರೀ ದಟ್ಟಣೆಯನ್ನು ನಿಯಂತ್ರಿಸುವ ಮತ್ತು ಸುಗಮ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಧಾರವಾಡ ಮತ್ತು ಪಂಡರಪುರ ನಿಲ್ದಾಣಗಳ ನಡುವೆ ಕಾಯ್ದಿರಿಸದ (Unreserved) ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ವೇಳಾಪಟ್ಟಿ ಮತ್ತು ಟ್ರಿಪ್‌ಗಳ ವಿವರ:
ರೈಲು ಸಂಖ್ಯೆ 07357/07358 ಧಾರವಾಡ–ಪಂಡರಪುರ–ಧಾರವಾಡ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಜುಲೈ 23 ರಿಂದ ಜುಲೈ 28 ರವರೆಗೆ ಪ್ರತಿದಿನ ಸಂಚರಿಸಲಿದ್ದು, ಒಟ್ಟು 6 ಟ್ರಿಪ್‌ಗಳ ಸೇವೆ ಲಭ್ಯವಿರಲಿದೆ.
ರೈಲು ಸಂಖ್ಯೆ 07357 (ಧಾರವಾಡ ಟು ಪಂಡರಪುರ): ಪ್ರತಿದಿನ ಮುಂಜಾನೆ 6:00 ಗಂಟೆಗೆ ಧಾರವಾಡದಿಂದ ಹೊರಟು, ಅದೇ ದಿನ ಸಾಯಂಕಾಲ 4:50 ಕ್ಕೆ ಪಂಡರಪುರವನ್ನು ತಲುಪಲಿದೆ.
ರೈಲು ಸಂಖ್ಯೆ 07358 (ಪಂಡರಪುರ ಟು ಧಾರವಾಡ): ಪಂಡರಪುರದಿಂದ ಪ್ರತಿದಿನ ಸಂಜೆ 6:40 ಕ್ಕೆ ಜರ್ನಿ ಆರಂಭಿಸಿ, ಮರುದಿನ ಮುಂಜಾನೆ 4:30 ಕ್ಕೆ ಧಾರವಾಡ ನಿಲ್ದಾಣಕ್ಕೆ ಬಂದು ತಲುಪಲಿದೆ.
ಪ್ರಮುಖ ನಿಲುಗಡೆಗಳು:
ಈ ವಿಶೇಷ ರೈಲು ತನ್ನ ಸಂಚಾರ ಮಾರ್ಗದ ಎರಡೂ ಕಡೆಗಳಲ್ಲಿ ಅಳ್ನಾವರ, ಲೊಂಡಾ, ಖಾನಾಪುರ, ದೇಸೂರ, ಬೆಳಗಾವಿ, ಪಚ್ಛಾಪುರ, ಗೋಕಾಕ್ ರೋಡ್, ಘಟಪ್ರಭಾ, ಚಿಕ್ಕೋಡಿ ರೋಡ್, ರಾಯಬಾಗ, ಚಿಂಚಲಿ, ಕುಡಚಿ, ಉಗಾರ ಖುರ್ದ್, ಶೇಡಬಾಳ, ವಿಜಯನಗರ, ಮಿರಜ್ ಜಂಕ್ಷನ್, ಅರಗ್, ಧಾಳಗಾವ್, ಜತ್ ರೋಡ್, ವಾಸುದ್ ಹಾಗೂ ಸಾಂಗೋಲಾ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಬೋಗಿಗಳ ವ್ಯವಸ್ಥೆ:
ಈ ವಿಶೇಷ ರೈಲು ಒಟ್ಟು 10 ಬೋಗಿಗಳ ಸಂಯೋಜನೆಯನ್ನು ಹೊಂದಿರಲಿದೆ. ಇದರಲ್ಲಿ ಸಾರ್ವಜನಿಕರ ಸಾಮಾನ್ಯ ಪ್ರಯಾಣಕ್ಕಾಗಿ 8 ದ್ವಿತೀಯ ದರ್ಜೆ (General Second Class) ಬೋಗಿಗಳು ಹಾಗೂ ದಿವ್ಯಾಂಗ ಸ್ನೇಹಿ ಸೌಲಭ್ಯಗಳನ್ನು ಒಳಗೊಂಡಿರುವ 2 ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.

