Wed. Jul 22nd, 2026

ಕೆಪಿಸಿಸಿ ಕಚೇರಿ ಎದುರು ಹೈಡ್ರಾಮಾ: ಬಿಜೆಪಿ ಶಾಸಕ ಬಿ.ಪಿ. ಹರೀಶ್‌ಗೆ ಮೊಟ್ಟೆ ಎಸೆತ

Share this with Friends

ಬೆಂಗಳೂರು:ರಾಜಧಾನಿಯ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ (KPCC) ಕಚೇರಿಯ ಮುಂಭಾಗದಲ್ಲಿ ಹೈಡ್ರಾಮಾ ನಡೆದಿದ್ದು, ಪ್ರತಿಭಟನೆಯಲ್ಲಿ ನಿರತರಾಗಲು ಆಗಮಿಸಿದ್ದ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಕೆಲವರು ಮೊಟ್ಟೆ ಎಸೆದು ಹಲ್ಲೆ ನಡೆಸಿದ ಘಟನೆ ನಡೆದಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಿಲುವುಗಳನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಆಕ್ರೋಶದ ಮೆರವಣಿಗೆಯ ವೇಳೆ ಈ ತೀವ್ರ ಹೈಡ್ರಾಮಾ ಸಂಭವಿಸಿದೆ.

ರಾಹುಲ್ ಗಾಂಧಿ ಅವರು ದೇಶದ್ರೋಹಿ ಶಕ್ತಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಮತ್ತು ದೇಶದ ಯುವಜನತೆಗೆ ದ್ರೋಹ ಎಸಗುತ್ತಿದ್ದಾರೆ ಎಂದು ಆರೋಪಿಸಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರು, ಸಂಸದರು ಮತ್ತು ನೂರಾರು ಕಾರ್ಯಕರ್ತರು ಕೆಪಿಸಿಸಿ ಕಚೇರಿಯತ್ತ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ಕಂಟೋನ್ಮೆಂಟ್ ಬಳಿಯೇ ಬಿಜೆಪಿಯವರನ್ನೆಲ್ಲಾ ಪೊಲೀಸರು ತಡೆದಿದ್ದಾರೆ, ಆದರೆ ಈ ಮಾಹಿತಿ ಇರದ ಶಾಸಕ ಬಿ.ಪಿ. ಹರೀಶ್ ನೇರವಾಗಿ ಕೆಪಿಸಿಸಿ ಕಚೇರಿ ಬಳಿ ಆಗಮಿಸಿದರು. ಕಾರಿನಿಂದ ಇಳಿದು ಕೆಪಿಸಿಸಿ ಕಚೇಎಇ ಕಡೆ ಹೆಜ್ಜೆ ಹಾಕುತ್ತಿದ್ದಂತೆ  ಅವರ ಮೇಲೆ ಮೊಟ್ಟೆ ಎಸೆಯಲಾಗಿದೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಶಾಸಕರನ್ನು ರಕ್ಷಿಸಿ ಬೇರೆ ವಾಹನದಲ್ಲಿ ಸುರಕ್ಷಿತವಾಗಿ ಕರೆದೊಯ್ದರು.

“ಕಾಂಗ್ರೆಸ್ಸಿಗರ ಮೊಟ್ಟೆ, ಮಚ್ಚುಗಳಿಗೆ ನಾವು ಹೆದರಲ್ಲ; ಸತ್ಯದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ”: ಶಾಸಕ ಬಿ.ಪಿ. ಹರೀಶ್ ತಿರುಗೇಟು

“ಕೆಪಿಸಿಸಿ ಕಚೇರಿಯ ಮುಂಭಾಗದಲ್ಲಿ ಕಾಂಗ್ರೆಸ್ ಗೂಂಡಾಗಳು ನಮ್ಮ ಮೇಲೆ ನಡೆಸಿರುವ ಮೊಟ್ಟೆ ದಾಳಿ ಮತ್ತು ಹಲ್ಲೆ ಯತ್ನವು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಇಂತಹ ಹೇಡಿ ಕೃತ್ಯಗಳಿಗೆ ಮತ್ತು ಗೂಂಡಾಗಿರಿಗೆ ಬಿಜೆಪಿ ಎಂದಿಗೂ ಹೆದರುವುದಿಲ್ಲ” ಎಂದು ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ತಿಳಿಸಿದರು.

ತಮ್ಮ ಮೇಲಿನ ಮೊಟ್ಟೆ ಎಸೆತದ ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತು ದೇಶವಿರೋಧಿ ಶಕ್ತಿಗಳ ಪರ ನಿಲ್ಲುವ ರಾಹುಲ್ ಗಾಂಧಿ ಅವರ ನಿಲುವುಗಳ ವಿರುದ್ಧ ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಆದರೆ, ಸಾರ್ವಜನಿಕವಾಗಿ ನಮ್ಮನ್ನು ಎದುರಿಸಲು ಧೈರ್ಯವಿಲ್ಲದ ಕಾಂಗ್ರೆಸ್ಸಿಗರು ಕಚೇರಿಯೊಳಗೆ ಮಚ್ಚು, ಲಾಂಗು ಹಾಗೂ ಮೊಟ್ಟೆಗಳನ್ನು ಮೊದಲೇ ಸಂಗ್ರಹಿಸಿಟ್ಟುಕೊಂಡು ಪ್ರಜಾಪ್ರಭುತ್ವ ವಿರೋಧಿಯಾಗಿ ವರ್ತಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಜನಪ್ರತಿನಿಧಿಗಳಿಗೇ ರಕ್ಷಣೆ ಇಲ್ಲ:

“ರಾಜಧಾನಿಯ ಮಧ್ಯಭಾಗದಲ್ಲಿ ವಿರೋಧ ಪಕ್ಷದ ಶಾಸಕರ ಮೇಲೆ ಈ ರೀತಿಯ ಭೀಕರ ದಾಳಿಗಳು ನಡೆಯುತ್ತಿರುವುದು ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ. ಶಾಸಕರಿಗೇ ರಕ್ಷಣೆ ಇಲ್ಲದ ಇಂತಹ ಗೂಂಡಾ ರಾಜ್ಯದಲ್ಲಿ ಸಾಮಾನ್ಯ ಜನಸಾಮಾನ್ಯರ ಗತಿ ಏನು?” ಎಂದು ಅವರು ಪ್ರಶ್ನಿಸಿದರು. ವೈಚಾರಿಕವಾಗಿ ಹೋರಾಡಲು ಸಾಧ್ಯವಾಗದಿದ್ದಾಗ ಇಂತಹ ದೈಹಿಕ ಹಲ್ಲೆಗಳಿಗೆ ಕಾಂಗ್ರೆಸ್ ಮುಂದಾಗುತ್ತದೆ. ನಮ್ಮ ಮೇಲೆ ಎಷ್ಟು ಮೊಟ್ಟೆ ಎಸೆದರೂ, ಎಷ್ಟೇ ದೌರ್ಜನ್ಯ ಎಸಗಿದರೂ ದೇಶದ ಯುವಜನತೆಯ ಪರವಾಗಿರುವ ಮತ್ತು ಕಾಂಗ್ರೆಸ್‌ನ ಜನವಿರೋಧಿ ನೀತಿಗಳ ವಿರುದ್ಧದ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹರೀಶ್ ಅವರು ಕಟ್ಟುನಿಟ್ಟಾಗಿ ಸಾರಿದರು.

ತಮ್ಮ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಶಾಸಕರು, ಈ ಕುರಿತು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಹಲ್ಲೆಕೋರರನ್ನು ತಕ್ಷಣವೇ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಕಮಿಷನರ್ ಅವರಿಗೆ ಆಗ್ರಹಿಸಿದ್ದಾರೆ.

 


Share this with Friends

Related Post