ಬೆಂಗಳೂರು: ಬಿಜೆಪಿ ಶಾಸಕರ ಮೇಲೆ ನಡೆದ ಭೀಕರ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ಭಾರತೀಯ ಜನತಾ ಪಕ್ಷದ (BJP) ಮುಖಂಡರು ಮತ್ತು ಕಾರ್ಯಕರ್ತರು ಇಂದು ನಗರದ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಧ್ವನಿ ಅಡಗಿಸಲು ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಹಿಂಸಾಚಾರದ ಹಾದಿ ಹಿಡಿದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕರಾದ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರ ಜಂಟಿ ನೇತೃತ್ವದಲ್ಲಿ ಈ ಧರಣಿ ಸಾಗಿತು. ನಿನ್ನೆ ಕೆಪಿಸಿಸಿ ಕಚೇರಿಯ ಮುಂಭಾಗದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಬಿಜೆಪಿ ಶಾಸಕರ ಮೇಲೆ ಕೊತ್ವಾಲ್ ರಾಮಚಂದ್ರನ ಶಿಷ್ಯರಾದ ಕಾಂಗ್ರೆಸ್ಸಿಗರು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ನಾಯಕರು ಕಟುವಾಗಿ ದೂರಿದರು.
ರಾಜ್ಯದಲ್ಲಿ ಹಳೇ ಗೂಂಡಾ ಸಂಸ್ಕೃತಿಯನ್ನು ಮರುಜೀವಗೊಳಿಸುವ ತಂತ್ರಗಾರಿಕೆ ನಡೆಯುತ್ತಿದೆ. ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಪ್ರೇರೇಪಣೆಯಿಂದಲೇ ಇಂತಹ ಸರಣಿ ದೌರ್ಜನ್ಯಗಳು ರಾಜ್ಯದಲ್ಲಿ ತಲೆಯೆತ್ತುತ್ತಿವೆ ಎಂದು ಮುಖಂಡರು ತೀವ್ರವಾಗಿ ಆಕ್ಷೇಪಿಸಿದರು. ಈ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಕ್ಷದ ಸಕ್ರಿಯ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ನೂರಾರು ಪ್ರಮುಖ ಪದಾಧಿಕಾರಿಗಳು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ರಾಜಭವನದ ಮೆಟ್ಟಿಲೇರಿದ ಬಿಜೆಪಿ ಬೃಹತ್ ನಿಯೋಗ:
ಬಿಜೆಪಿ ಶಾಸಕರ ಮೇಲೆ ನಡೆದ ಹಲ್ಲೆ ಮತ್ತು ಮೊಟ್ಟೆ ದಾಳಿ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ವಿರೋಧ ಪಕ್ಷದ ನಾಯಕರು, ಈಗ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ನೇರವಾಗಿ ರಾಜಭವನದ ಮೆಟ್ಟಿಲೇರಿದ್ದಾರೆ. ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಬೃಹತ್ ಪ್ರತಿಭಟನಾ ಧರಣಿ ನಡೆಸಿದ ಬಳಿಕ, ಬಿಜೆಪಿ ನಾಯಕರ ಉನ್ನತ ನಿಯೋಗವು ರಾಜಭವನಕ್ಕೆ ತೆರಳಿ ರಾಜ್ಯಪಾಲರ ಕಾರ್ಯದರ್ಶಿಗಳಿಗೆ ಅಧಿಕೃತ ಮನವಿ ಪತ್ರವನ್ನು ಸಲ್ಲಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದ ನಿಯೋಗವು ಈ ದೂರು ನೀಡಿದೆ. ನಿನ್ನೆ ಕೆಪಿಸಿಸಿ ಕಚೇರಿಯ ಮುಂಭಾಗದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ವಿರೋಧ ಪಕ್ಷದ ಶಾಸಕರ ಮೇಲೆ ಆಡಳಿತ ಪಕ್ಷದ ಪ್ರೇರೇಪಿತ ಗೂಂಡಾಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಜನಪ್ರತಿನಿಧಿಗಳಿಗೇ ರಕ್ಷಣೆ ಇಲ್ಲದಂತಾಗಿರುವ ಈ ಪರಿಸ್ಥಿತಿಯ ಕುರಿತು ತಕ್ಷಣವೇ ಕಾನೂನು ಕ್ರಮ ಜರುಗಿಸಲು ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ನಿಯೋಗವು ರಾಜ್ಯಪಾಲರ ಕಾರ್ಯದರ್ಶಿಗಳ ಮೂಲಕ ಮನವಿ ಮಾಡಿದೆ
ಶಾಸಕರ ಮೇಲೆಯೇ ಹಲ್ಲೆ ನಡೆಸುವ ಮಟ್ಟಿಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ:
ಈ ವೇಳೆ ಮಾತನಾಡಿದ ವಿಜಯೇಂದ್ರ, “ರಾಜ್ಯದಲ್ಲಿ ಜನಪ್ರತಿನಿಧಿಗಳಾಗಿರುವ ಶಾಸಕರ ರಕ್ಷಣೆಗೇ ಧಕ್ಕೆ ಬಂದಿದೆ. ಸಾರ್ವಜನಿಕವಾಗಿ ಶಾಸಕರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದರೆ ಇದು ಅತ್ಯಂತ ನಾಲಾಯಕ್ ಹಾಗೂ ವಿಫಲ ಕಾಂಗ್ರೆಸ್ ಸರ್ಕಾರ” ಎಂದು ಆಕ್ರೋಶ ಹೊರಹಾಕಿದರು.
ವಿರೋಧ ಪಕ್ಷದ ನಾಯಕರು ಕಾನೂನಿನ ಚೌಕಟ್ಟಿನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಾಗ ಆಡಳಿತ ಪಕ್ಷದ ಕಾರ್ಯಕರ್ತರು ಗೂಂಡಾ ಪ್ರವೃತ್ತಿ ಪ್ರದರ್ಶಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಬದಲು ದೌರ್ಜನ್ಯದ ಮೂಲಕ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ದುಷ್ಕರ್ಮಿಗಳಿಗೆ ಸರ್ಕಾರದ ಪರೋಕ್ಷ ಬೆಂಬಲವಿದೆ ಎಂದು ದೂರಿದ್ದಾರೆ.

