Thu. Jul 23rd, 2026

ನೀಟ್ ಅಕ್ರಮದ ವಿರುದ್ಧ ಸಿಡಿದಿದ್ದ ಠಾಕ್ರೆ ಸಹೋದರರು: ಜುಲೈ 26 ರಂದು ಮುಂಬೈನಲ್ಲಿ ಬೃಹತ್ ಪಕ್ಷಾತೀತ ಪ್ರತಿಭಟನೆಗೆ ಕರೆ

Share this with Friends

ಮುಂಬೈ: ದೇಶದ ಶೈಕ್ಷಣಿಕ ವಲಯದಲ್ಲಿ ತಲ್ಲಣ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣ ಮತ್ತು ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಜುಲೈ 26 ರಂದು ಮುಂಬೈನಲ್ಲಿ ಬೃಹತ್ ಜನಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಅಧ್ಯಕ್ಷ ರಾಜ್ ಠಾಕ್ರೆ ಪ್ರಕಟಿಸಿದ್ದಾರೆ.

ಈ ಕುರಿತು ಶಿವಸೇನೆ (UBT) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿರುವ ಅವರು, ವಿದ್ಯಾರ್ಥಿಗಳ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟವನ್ನು ದಮನ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಉನ್ನತ ಅಧಿಕಾರದಲ್ಲಿ ಇರುವವರು ವ್ಯವಸ್ಥೆಯ ವೈಫಲ್ಯಗಳ ಹೊಣೆ ಹೊರಬೇಕು ಎಂದು ಒತ್ತಾಯಿಸಿದ ರಾಜ್ ಠಾಕ್ರೆ, “ಹಿಂದೆ ತಾವು ವಿರೋಧ ಪಕ್ಷದಲ್ಲಿದ್ದಾಗ ಸಣ್ಣ ಲೋಪಗಳಿಗೂ ಸಚಿವರ ರಾಜೀನಾಮೆ ಕೇಳುತ್ತಿದ್ದ ಬಿಜೆಪಿ, ಈಗ ಇಷ್ಟೊಂದು ದೊಡ್ಡ ಅಕ್ರಮ ನಡೆದಿದ್ದರೂ ತನ್ನ ಸಚಿವರನ್ನು ರಕ್ಷಿಸುತ್ತಿದೆ. ಪ್ರತಿಭಟನಾಕಾರರ ಅಥವಾ ಸಂತ್ರಸ್ತರ ಅಹವಾಲುಗಳನ್ನು ಆಲಿಸಲು ಸಿದ್ಧರಿಲ್ಲದ ಕೇಂದ್ರದ ಧೋರಣೆಯು ಕೇವಲ ಅಧಿಕಾರದ ಮದವನ್ನು ತೋರಿಸುತ್ತದೆ” ಎಂದು ಕಟುವಾಗಿ ಆಕ್ಷೇಪಿಸಿದರು.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಹಿತ ಕಾಯಲು ಜುಲೈ 26, 2026 ರಂದು ಬೆಳಗ್ಗೆ 10 ಗಂಟೆಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಪಾರ್ಕ್‌ನಲ್ಲಿರುವ ಶಿವಾಜಿ ಮಹಾರಾಜರ ಪ್ರತಿಮೆಯಿಂದ ಬೃಹತ್ ರ‍್ಯಾಲಿ ಆರಂಭವಾಗಲಿದೆ. ಇದು ಸಂಪೂರ್ಣವಾಗಿ ಪಕ್ಷಾತೀತ ಮತ್ತು ರಾಜಕೀಯ ರಹಿತ ಹೋರಾಟವಾಗಿದ್ದು, ಮೆರವಣಿಗೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಧ್ವಜಗಳನ್ನು ಬಳಸಲಾಗುವುದಿಲ್ಲ. ಇದು ಕೇವಲ ಒಂದು ಪರೀಕ್ಷೆಯ ಪ್ರಶ್ನೆಯಲ್ಲ, ಯುವ ಪೀಳಿಗೆಯ ಭವಿಷ್ಯವನ್ನು ಉಳಿಸುವ ಹೋರಾಟವಾಗಿದೆ. ಆದ್ದರಿಂದ ಈ ಮಹಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಜೊತೆಗೆ ಅವರ ಪೋಷಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅವರು ಕರೆ ನೀಡಿದ್ದಾರೆ.

 

 


Share this with Friends

Related Post