ಬೆಂಗಳೂರು: “ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಕ್ರಮಕ್ಕೆ ಮುಂದಾಗುವ ಬದಲು, ಈ ಬಿಕ್ಕಟ್ಟು ಆರಂಭವಾದಾಗಲೇ ಮಾತನಾಡಬೇಕಿತ್ತು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಕೆ.ಜಿ. ರಸ್ತೆ ಬಳಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಯುವಜನತೆಯ ಬದುಕಿನ ಜೊತೆ ಆಟವಾಡಿರುವ ಯಾವುದೇ ತಪ್ಪಿತಸ್ಥರನ್ನು ರಕ್ಷಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಬಾರದು ಎಂದು ಒತ್ತಾಯಿಸಿದರು.
ವೈಫಲ್ಯವನ್ನು ಒಪ್ಪಿಕೊಳ್ಳುವಂತೆ ಬಿಜೆಪಿಗೆ ಕಿವಿಮಾತು ಹೇಳಿದ ಡಿ.ಕೆ. ಶಿವಕುಮಾರ್, “ಬಿಜೆಪಿ ನಾಯಕರೇ, ನಿಮ್ಮ ಮಕ್ಕಳೂ ಇದೇ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂಬುದನ್ನು ಮರೆಯಬೇಡಿ. ದೇಶದಲ್ಲಿ ಸರಣಿಯಾಗಿ ಪೇಪರ್ ಲೀಕ್ ಆಗುತ್ತಿರುವುದರಿಂದ ಪ್ರತಿಭಾವಂತ ಯುವಕರ ಭವಿಷ್ಯ ಕತ್ತಲಿಗೆ ತಳ್ಳಲ್ಪಡುತ್ತಿದೆ. ಈ ವ್ಯವಸ್ಥಿತ ವೈಫಲ್ಯದ ಹೊಣೆಯನ್ನು ಕೇವಲ ಒಬ್ಬ ವ್ಯಕ್ತಿಯ ರಾಜೀನಾಮೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಇಷ್ಟು ದೊಡ್ಡ ಮಟ್ಟದ ಅಕ್ರಮಗಳಿಗೆ ಯಾರು ಜವಾಬ್ದಾರರು?” ಎಂದು ಪ್ರಶ್ನಿಸಿದರು. ಈಗಾಗಲೇ ದೇಶದಲ್ಲಿ ಬೇರೆ ಬೇರೆ ಹಂತದ ಸುಮಾರು 100ಕ್ಕೂ ಹೆಚ್ಚು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಂಸತ್ತಿನಲ್ಲಿ ಮುಕ್ತ ಚರ್ಚೆಗೆ ಆಗ್ರಹ
ಈ ಗಂಭೀರ ವಿಷಯದ ಕುರಿತು ಸಂಸತ್ತಿನಲ್ಲಿ ಮುಕ್ತವಾಗಿ ಚರ್ಚೆಯಾಗಬೇಕು ಎಂದು ಒತ್ತಾಯಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲೋಪದೋಷಗಳನ್ನು ಪರಸ್ಪರ ಟೀಕೆ ಮತ್ತು ಚರ್ಚೆಗಳ ಮೂಲಕ ತಿದ್ದಿಕೊಳ್ಳಬೇಕಿದೆ ಎಂದರು. “ಪ್ರಶ್ನೆ ಪತ್ರಿಕೆ ಸೋರಿಕೆ ಎಂಬುದು ಕೇವಲ ರಾಜಕೀಯ ಪಕ್ಷಗಳ ನಡುವಿನ ಕೆಸರೆರಚಾಟದ ವಿಚಾರವಲ್ಲ, ಇದು ಇಡೀ ದೇಶದ ಭವಿಷ್ಯದ ಪ್ರಶ್ನೆ. ಜಾಗತಿಕ ಮಟ್ಟದಲ್ಲಿ ಭಾರತದ ಯುವ ಪ್ರತಿಭೆಗಳಿಗೆ ಅತ್ಯುನ್ನತ ಗೌರವವಿದೆ. ನಮ್ಮ ದೇಶದ ಶೈಕ್ಷಣಿಕ ಗುಣಮಟ್ಟ ಮತ್ತು ಪರೀಕ್ಷಾ ಪದ್ಧತಿಯ ಪಾರದರ್ಶಕತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದು ಅವರು ಪ್ರತಿಪಾದಿಸಿದರು.
ಮಾಧ್ಯಮಗಳ ಮೇಲಿನ ದೌರ್ಜನ್ಯ ಖಂಡನೀಯ: “ಇತ್ತೀಚಿನ ದಿನಗಳಲ್ಲಿ ಮುಖ್ಯವಾಹಿನಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿ, ಬೆದರಿಕೆ ಒಡ್ಡುವ ಮೂಲಕ ಸತ್ಯ ಹೊರಬಾರದಂತೆ ತಡೆಯುವ ಪ್ರಯತ್ನಗಳು ನಡೆಯುತ್ತಿವೆ. ಮಾಧ್ಯಮಗಳು ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿದ್ದರೂ ಇಂತಹ ಸಂದರ್ಭಗಳಲ್ಲಿ ಮುಂಚೂಣಿಗೆ ಬಂದು ಪ್ರಶ್ನೆ ಮಾಡದಿರುವುದು ಆಶ್ಚರ್ಯ ತಂದಿದೆ. ಆದರೆ, ಪ್ರತ್ಯಕ್ಷದರ್ಶಿಗಳು ಮಾಡಿದ ವಿಡಿಯೋಗಳು ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರವೇ ಮಾಧ್ಯಮಗಳು ಎಚ್ಚೆತ್ತುಕೊಂಡಿವೆ. ಇದು ನಿಜಕ್ಕೂ ಇಂದಿನ ಹೊಸ ತಲೆಮಾರಿನ ಡಿಜಿಟಲ್ ಹೋರಾಟದ ಶಕ್ತಿಯನ್ನು ತೋರಿಸುತ್ತದೆ” ಎಂದರು.
ಮೊಟ್ಟೆ ಎಸೆತ ಸಮರ್ಥಿಸಲ್ಲ, ಬಿಜೆಪಿಯೂ ಇತಿಹಾಸ ನೆನಪಿಸಿಕೊಳ್ಳಲಿ
ಇದೇ ವೇಳೆ ಬಿಜೆಪಿ ಶಾಸಕರ ಮೇಲಿನ ಮೊಟ್ಟೆ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, “ನಾವು ಕೂಡ ಪೇಪರ್ ಲೀಕ್ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದೇವೆ. ಆದರೆ ಕಾಂಗ್ರೆಸ್ ಕಚೇರಿ ಬಳಿ ನಡೆದ ಮೊಟ್ಟೆ ಎಸೆತದ ಘಟನೆಯನ್ನು ನಾನು ಯಾವುದೇ ಕಾರಣಕ್ಕೂ ಸಮರ್ಥಿಸುವುದಿಲ್ಲ. ಈ ಕುರಿತು ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ ಇದನ್ನೇ ದೊಡ್ಡದು ಮಾಡುತ್ತಿರುವ ಬಿಜೆಪಿ ನಾಯಕರು ಹಿಂದೆ ತಾವು ಮಾಡಿದ ಕೃತ್ಯಗಳನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಆಯುಧಗಳು ಸಿಕ್ಕಿದ್ದು, ಶಾಲಾ ಆವರಣದಲ್ಲಿ ರೈಫಲ್ ತರಬೇತಿ ನೀಡಿದ ಇತಿಹಾಸ ಅವರದ್ದೇ ಆಗಿದೆ” ಎಂದು ತಿರುಗೇಟು ನೀಡಿದರು.
ರಾಜ್ಯದಲ್ಲಿ ಕೊತ್ವಾಲ್ ಸಂಸ್ಕೃತಿ ಆಡಳಿತ ನಡೆಸುತ್ತಿದೆ ಎಂಬ ಬಿಜೆಪಿಯ ಟೀಕೆಗಳಿಗೆ ತೀಕ್ಷ್ಣ ವ್ಯಂಗ್ಯವಾಡಿದ ಅವರು, “ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಹೇಗೆ ಬೇಕಾದರೂ ಮಾತನಾಡಿಕೊಳ್ಳಲಿ. ನಾನು ಗ್ರಾಮೀಣ ಭಾಗದಿಂದ ಬಂದು, ವಿದ್ಯಾರ್ಥಿ ದೆಸೆಯಿಂದಲೇ ನಾಯಕನಾಗಿ ಹಂತ ಹಂತವಾಗಿ ಬೆಳೆದು ಇಂದು ಈ ಉನ್ನತ ಸ್ಥಾನಕ್ಕೇರಿದ್ದೇನೆ. ನನ್ನ ಪಾರದರ್ಶಕ ರಾಜಕಾರಣ ಮತ್ತು ಆಡಳಿತವನ್ನು ಸಹಿಸಿಕೊಳ್ಳಲು ಅವರ ಕೈಯಿಂದ ಆಗುತ್ತಿಲ್ಲ ಎಂದಾದರೆ ನಾನೇನೂ ಮಾಡಲು ಸಾಧ್ಯವಿಲ್ಲ” ಎಂದು ತಿರುಗೇಟು ನೀಡಿದರು

