ಬೆಂಗಳೂರು: ರಾಜ್ಯಪಾಲ ಡಾ. ಥಾವರ್‌ಚಂದ್ ಗೆಹ್ಲೋಟ್ ಅವರು ಇಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರ ಪದ್ಮನಾಭನಗರದ ನಿವಾಸಕ್ಕೆ ಭೇಟಿ ನೀಡಿದರು. ಇತ್ತೀಚೆಗೆ ನಿಧನರಾದ ದೇವೇಗೌಡರ ಧರ್ಮಪತ್ನಿ, ಶಿವೈಕ್ಯ ಶ್ರೀಮತಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದರು.
ಕುಟುಂಬಸ್ಥರಿಗೆ ರಾಜ್ಯಪಾಲರ ಸಾಂತ್ವನ:
ಶ್ರೀಮತಿ ಚೆನ್ನಮ್ಮ ಅವರ ನಿಧನದಿಂದ ತೀವ್ರ ಆಘಾತಕ್ಕೊಳಗಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ರಾಜ್ಯಪಾಲರು ಹೆಗಲ ಮೇಲೆ ಕೈಹಾಕಿ ಸಾಂತ್ವನ ಹೇಳಿದರು. ವಯೋಸಹಜ ಅನಾರೋಗ್ಯದಿಂದ ವಿಧಿವಶರಾದ ಚೆನ್ನಮ್ಮ ಅವರ ನಿಧನವು ಇಡೀ ಕುಟುಂಬಕ್ಕೆ ಮತ್ತು ನಾಡಿಗೆ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ಕರುಣಿಸಲಿ ಎಂದು ರಾಜ್ಯಪಾಲರು ಪ್ರಾರ್ಥಿಸಿದರು.ಕುಟುಂಬ ಸದಸ್ಯರಿಗೆ ಧೈರ್ಯದ ನುಡಿಗಳನ್ನಾಡಿದರು.
ರಾಜ್ಯಪಾಲರ ಭೇಟಿಯ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ ಸೇರಿದಂತೆ ದೇವೇಗೌಡರ ಕುಟುಂಬದ ಇತರೆ ಪ್ರಮುಖ ಸದಸ್ಯರು ಹಾಗೂ ಶಾಸಕರು ಉಪಸ್ಥಿತರಿದ್ದರು. ರಾಜ್ಯಪಾಲರ ಭೇಟಿಯ ವೇಳೆ ಕುಟುಂಬದ ಸದಸ್ಯರು ತಾಯಿಯವರ ಕೊನೆಯ ದಿನಗಳ ಆರೋಗ್ಯ ಸ್ಥಿತಿಯ ಕುರಿತು ಮಾಹಿತಿ ಹಂಚಿಕೊಂಡರು.

