Fri. Jul 24th, 2026

‘ನನ್ನ ಯಶಸ್ಸಿನ ಹಿಂದಿನ ನೈಜ ಚೈತನ್ಯಶಕ್ತಿ ಆಕೆಯೇ’: ಪತ್ನಿ ಚೆನ್ನಮ್ಮ ಅಗಲಿಕೆಗೆ ದೇವೇಗೌಡರ ಭಾವುಕ ಕೃತಜ್ಞತಾ ಪತ್ರ!

Share this with Friends

ಬೆಂಗಳೂರು:ತಮ್ಮ ಸುದೀರ್ಘ 72 ವರ್ಷಗಳ ದಾಂಪತ್ಯ ಜೀವನದ ಸಹಧರ್ಮಿಣಿ, ಇತ್ತೀಚೆಗೆ ಶಿವೈಕ್ಯರಾದ ಶ್ರೀಮತಿ ಚೆನ್ನಮ್ಮ ಅವರ ನಿಧನಕ್ಕೆ ನಾಡಿನ ಜನತೆ, ಗಣ್ಯರು ಮತ್ತು ಅಭಿಮಾನಿಗಳು ತೋರಿದ ಪ್ರೀತಿ-ಗೌರವಕ್ಕೆ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು ಅತ್ಯಂತ ಭಾವುಕರಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಕುರಿತು ವಿಶೇಷ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತಮ್ಮ ದುಃಖದ ಮಡುವಿನಲ್ಲಿ ಭಾಗಿಯಾಗಿ ಸಾಂತ್ವನ ಹೇಳಿದ ಪ್ರತಿಯೊಬ್ಬರಿಗೂ ಕೈಜೋಡಿಸಿ ವಿನೀತನಾಗಿ ನಮಿಸುವುದಾಗಿ ತಿಳಿಸಿದ್ದಾರೆ.

ಬಾಳಬಂಡಿಯ ಏಳು ದಶಕಗಳ ಪಯಣ:

“ಹಿರಿಯರ ಆಶೀರ್ವಾದದೊಂದಿಗೆ ಸಪ್ತಪದಿ ತುಳಿದು ಬಾಳಬಂಡಿ ಏರಿದ್ದ ನಾವಿಬ್ಬರು, ಸುಖ-ದುಃಖಗಳನ್ನು ಸಮನಾಗಿ ಹಂಚಿಕೊಂಡು ಸಪ್ತ ದಶಕಗಳಿಗೂ ಹೆಚ್ಚು ಕಾಲ ತುಂಬು ಜೀವನ ನಡೆಸಿದ್ದೇವೆ” ಎಂದು ದೇವೇಗೌಡರು ತಮ್ಮ ಪತ್ರದಲ್ಲಿ ನೆನಪಿಸಿಕೊಂಡಿದ್ದಾರೆ. ಕಳೆದ ಜುಲೈ 18ರಂದು ಶನಿವಾರದಂದು ಚೆನ್ನಮ್ಮನವರು ನಿಧನರಾದಾಗ ಮನೆಯ ನಂದಾದೀಪವೇ ನಂದಿಹೋದ ಅನುಭವವಾಯಿತು ಎಂದು ಅವರು ಕರಳು ಹಿಂಡುವಂತೆ ಬರೆದಿದ್ದಾರೆ.

ತ್ಯಾಗಮಯಿ ಪತ್ನಿಯ ಗುಣಗಾನ:

ತಮ್ಮ ರಾಜಕೀಯ ಯಶಸ್ಸಿನ ಸಂಪೂರ್ಣ ಶ್ರೇಯಸ್ಸನ್ನು ಪತ್ನಿಗೆ ಅರ್ಪಿಸಿರುವ ಮಾಜಿ ಪ್ರಧಾನಿಗಳು, “ರಾಜ್ಯದಲ್ಲಿ ಶಾಸಕನಾಗಿ, ಪ್ರತಿಪಕ್ಷದ ನಾಯಕನಾಗಿ, ಸಚಿವನಾಗಿ, ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಮಂತ್ರಿಯಾಗಿ ರಾಷ್ಟ್ರಸೇವೆ ಮಾಡುವ ಸೌಭಾಗ್ಯ ನನಗೆ ಒದಗಿಬಂತು. ಈ ಎಲ್ಲಾ ಕೀರ್ತಿ ಮತ್ತು ಪ್ರಖ್ಯಾತಿಗಳು ಬಾಹ್ಯವಾಗಿ ನನಗಷ್ಟೇ ಸಿಕ್ಕಿದ್ದರೂ, ಅದರ ಹಿಂದಿನ ನಿಜವಾದ ಚೈತನ್ಯಶಕ್ತಿ ಚೆನ್ನಮ್ಮನವರೇ ಆಗಿದ್ದರು. ಗಂಧದ ಕೊರಡು ತನ್ನನ್ನು ತಾನು ತೇಯ್ದುಕೊಂಡು ಸಮಾಜಕ್ಕೆ ಪರಿಮಳ ಹೊರಸೂಸುವಂತೆ, ಚೆನ್ನಮ್ಮನವರ ಎಣೆಯಿಲ್ಲದ ಮಮತೆ ಹಾಗೂ ನಿರಂತರ ತ್ಯಾಗಶೀಲತೆ ನನ್ನ ವೈಯಕ್ತಿಕ ಮತ್ತು ರಾಜಕೀಯ ಬಾಳಿಗೆ ಪರಿಪೂರ್ಣತೆಯನ್ನು ತುಂಬಿತು” ಎಂದು ಬಣ್ಣಿಸಿದ್ದಾರೆ.

ಮನೆಯ ಅನ್ನಪೂರ್ಣೆಯಾಗಿದ್ದ ಅಮ್ಮ:

ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಸಾಧಾರಣ ಕುಟುಂಬದ ಸೊಸೆಯಾಗಿ ಬಂದ ಚೆನ್ನಮ್ಮನವರು, ತಮ್ಮ ದೈವಭಕ್ತಿ, ಸಾತ್ವಿಕತೆ ಮತ್ತು ಸಾಂಪ್ರದಾಯಿಕ ನಡವಳಿಕೆಗಳ ಮೂಲಕ ಇಡೀ ಮನೆಯನ್ನು ನಂದಗೋಕುಲವನ್ನಾಗಿ ಪರಿವರ್ತಿಸಿದ್ದರು ಎಂದು ದೇವೇಗೌಡರು ಹೇಳಿದ್ದಾರೆ. “ಅವರು ಕೇವಲ ನನ್ನ ಪತ್ನಿಯಾಗಿರಲಿಲ್ಲ. ನಿತ್ಯ ದಾಸೋಹದ ಮೂಲಕ ನಮ್ಮ ಮನೆಗೆ ಬಂದವರಿಗೆಲ್ಲ ಅನ್ನ ನೀಡಿದ ಅನ್ನಪೂರ್ಣೆಯಾಗಿದ್ದರು. ಅವರ ಉದಾತ್ತ ಮಾನವೀಯ ಮೌಲ್ಯಗಳು ಹಾಗೂ ಶುದ್ಧ ಅಂತಃಕರಣದ ಮಾತೃಪ್ರೇಮದ ಕಾರಣದಿಂದಾಗಿಯೇ ಅವರು ಇವತ್ತು ಇಡೀ ನಾಡಿನ ಜನರ ಪಾಲಿಗೆ ‘ಅಮ್ಮ’ನಾಗಿ ಗೌರವಿಸಲ್ಪಡುತ್ತಿದ್ದಾರೆ” ಎಂದು ಭಾವುಕರಾಗಿ ಕೃತಜ್ಞತಾ ಪತ್ರವನ್ನು ಮುಕ್ತಾಯಗೊಳಿಸಿದ್ದಾರೆ.

 

 


Share this with Friends

Related Post