Fri. Jul 24th, 2026

ರೋಡ್ ರೇಜ್ ಕೇಸ್: ಮಲೂರು ನ್ಯಾಯಾಧೀಶೆ ಗಾಯತ್ರಿ ಅಮಾನತಿಗೆ ವಕೀಲರ ಸಂಘ ಆಗ್ರಹ!

Share this with Friends

ಬೆಂಗಳೂರು:ಸಾರ್ವಜನಿಕ ರಸ್ತೆಯಲ್ಲಿ ಸಾಮಾನ್ಯ ಯುವಕನೋರ್ವನೊಂದಿಗೆ ರಸ್ತೆ ರಂಪಾಟ (Road Rage) ನಡೆಸಿ, ಅಧಿಕಾರ ದುರುಪಯೋಗಪಡಿಸಿಕೊಂಡ ಗಂಭೀರ ಆರೋಪ ಎದುರಿಸುತ್ತಿರುವ ಮಲೂರಿನ ನ್ಯಾಯಾಧೀಶರಾದ ಗಾಯತ್ರಿ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಬೆಂಗಳೂರು ವಕೀಲರ ಸಂಘ (AAB) ಆಗ್ರಹಿಸಿದೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಚ್.ಆರ್. ಕೃಷ್ಣಕುಮಾರ್ ಅವರಿಗೆ ಸಂಘದ ಪದಾಧಿಕಾರಿಗಳು ಇಂದು ಅಧಿಕೃತ ಮನವಿ ಪತ್ರ ಸಲ್ಲಿಸಿದ್ದಾರೆ.

ಅಧಿಕಾರ ದುರುಪಯೋಗದ ಗಂಭೀರ ಆರೋಪ:

ನ್ಯಾಯಾಧೀಶರಾದ ಗಾಯತ್ರಿ ಅವರು ಸಾರ್ವಜನಿಕ ರಸ್ತೆಯಲ್ಲಿ ಸಾಮಾನ್ಯ ವಿದ್ಯಾರ್ಥಿಯೊಬ್ಬನೊಂದಿಗೆ ತೀವ್ರ ಉದ್ಧಟತನದಿಂದ ವರ್ತಿಸಿದ್ದಾರೆ ಎಂದು ವಕೀಲರ ಸಂಘ ಆರೋಪಿಸಿದೆ. ಕೇವಲ ವೈಯಕ್ತಿಕ ಇಗೋ ಮತ್ತು ದ್ವೇಷದ ಹಿನ್ನೆಲೆಯಲ್ಲಿ, ತಮ್ಮ ನ್ಯಾಯಾಂಗ ಪ್ರಭಾವವನ್ನು ಬಳಸಿ ಆ ಅಮಾಯಕ ಯುವಕನ ವಿರುದ್ಧ ಎಫ್‌ಐಆರ್ (FIR) ದಾಖಲಾಗುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಆತನಿಗೆ ಬರೋಬ್ಬರಿ 17,000 ರೂಪಾಯಿಗಳ ಭಾರೀ ಮೊತ್ತದ ದಂಡ ವಿಧಿಸುವಂತೆ ಪ್ರಭಾವ ಬೀರಿದ್ದಾರೆ ಎಂದು ಮನವಿ ಪತ್ರದಲ್ಲಿ ಗಂಭೀರವಾಗಿ ಉಲ್ಲೇಖಿಸಲಾಗಿದೆ.

ಕಾನೂನು ವಲಯದಲ್ಲಿ ತೀವ್ರ ಆಕ್ರೋಶ:

ಸಾರ್ವಜನಿಕರಿಗೆ ನ್ಯಾಯದಾನ ಮಾಡಬೇಕಾದ ಅತ್ಯುನ್ನತ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಈ ರೀತಿ ಅಹಂಕಾರ ಹಾಗೂ ಅಮಾನವೀಯವಾಗಿ ವರ್ತಿಸಿರುವುದು ಕಾನೂನು ವಲಯ ಮತ್ತು ನಾಗರಿಕ ಸಮಾಜದಲ್ಲಿ ತೀವ್ರ ಆಘಾತ ಮೂಡಿಸಿದೆ. ಇಂತಹ ವರ್ತನೆ ತೋರುವ ವ್ಯಕ್ತಿಗಳು ನ್ಯಾಯಾಧೀಶರ ಪವಿತ್ರ ಹುದ್ದೆಯಲ್ಲಿ ಮುಂದುವರಿಯಲು ಯಾವುದೇ ರೀತಿಯಲ್ಲೂ ಅರ್ಹರಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ವಕೀಲರು ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ.

ತಕ್ಷಣದ ಶಿಸ್ತುಕ್ರಮಕ್ಕೆ ಹಕ್ಕೊತ್ತಾಯ:

ಒಬ್ಬ ವಿದ್ಯಾರ್ಥಿಯ ಭವಿಷ್ಯ ಮತ್ತು ಜೀವನಕ್ಕೆ ಧಕ್ಕೆ ತಂದಿರುವ ಈ ಘಟನೆಯನ್ನು ಹೈಕೋರ್ಟ್ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ನ್ಯಾಯಾಧೀಶೆಯ ವಿರುದ್ಧ ತಕ್ಷಣವೇ ಇಲಾಖಾ ಶಿಸ್ತು ಕ್ರಮ ಜರುಗಿಸಬೇಕು ಮತ್ತು ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್.ವಿ. ಪ್ರವೀಣ್ ಗೌಡ, ಉಪಾಧ್ಯಕ್ಷ ಗಿರೀಶ್ ಕುಮಾರ್ ಸಿ.ಎಸ್. ಹಾಗೂ ಖಜಾಂಚಿ ಶ್ವೇತಾ ರವಿಶಂಕರ್ ಅವರು ಹೈಕೋರ್ಟ್‌ಗೆ ಒತ್ತಾಯಿಸಿದ್ದಾರೆ.

 

 


Share this with Friends

Related Post