Sat. Jul 25th, 2026

ಪ್ರಧಾನ್ ರಾಜೀನಾಮೆ ಕಾಂಗ್ರೆಸ್ ಗೆಲುವಲ್ಲ; ಬಿ.ವೈ ವಿಜಯೇಂದ್ರ !

Share this with Friends

ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಕಾಂಗ್ರೆಸ್ ನಾಯಕರು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. ಪ್ರಧಾನ್ ಅವರ ನಿರ್ಧಾರವನ್ನು “ಕಾಂಗ್ರೆಸ್ ಪಕ್ಷದ ಗೆಲುವು” ಎಂದು ಬೀಗುತ್ತಿರುವ ವಿರೋಧ ಪಕ್ಷದ ನಾಯಕರ ಹೇಳಿಕೆಗಳು ಕೇವಲ ರಾಜಕೀಯ ಪ್ರೇರಿತ ಎಂದು ಅವರು ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮೇಂದ್ರ ಪ್ರಧಾನ್ ಅವರ ರಾಜಕೀಯ ಜೀವನವನ್ನು ನೆನಪಿಸಿಕೊಂಡ ವಿಜಯೇಂದ್ರ, ಪ್ರಧಾನ್ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ದಿನಗಳಿಂದಲೂ ವಿದ್ಯಾರ್ಥಿಗಳ ಪರವಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದವರು ಎಂದು ಬಣ್ಣಿಸಿದರು. ನೀಟ್ (NEET) ಪರೀಕ್ಷಾ ಅಕ್ರಮ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಅತ್ಯಂತ ದುರಾದೃಷ್ಟಕರ ಬೆಳವಣಿಗೆಗಳಾಗಿದ್ದು, ಪ್ರಧಾನ್ ಅವರು ವಿದ್ಯಾರ್ಥಿಗಳ ಭಾವನೆಗಳಿಗೆ ಬೆಲೆ ಕೊಟ್ಟು, ಅವರ ಹೋರಾಟವನ್ನು ಗೌರವಿಸಿ ಈ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.

ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿದೇಶದಲ್ಲಿದ್ದುಕೊಂಡು ಮೋಜು ಮಾಡುತ್ತಿದ್ದರು. ವಿದೇಶದಿಂದ ಮರಳಿದ ನಂತರವೂ ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಬದಲು, ಜ್ವಲಂತ ಸಮಸ್ಯೆಯನ್ನು ಮತ್ತಷ್ಟು ಭಾಷಣಗಳ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡಿದರು ಎಂದು ಅವರು ಗಂಭೀರ ಆರೋಪ ಮಾಡಿದರು.

ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಫೋಟೋ ಪ್ರದರ್ಶನ; ವಾಂಗ್ಚುಕ್ ಉಪವಾಸ ವಾಪಸ್:

ವಿದ್ಯಾರ್ಥಿಗಳ ಸಾತ್ವಿಕ ಹೋರಾಟವನ್ನು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕೆಲವು ಸಮಾಜವಿರೋಧಿ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ಆತಂಕಕಾರಿ ಸತ್ಯವನ್ನು ಬಿಚ್ಚಿಟ್ಟ ವಿಜಯೇಂದ್ರ, ಲಡಾಖ್‌ನ ಪ್ರಮುಖ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ತಮ್ಮ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯಲು ಇದೇ ಪ್ರಮುಖ ಕಾರಣ ಎಂದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳ ಸ್ವರೂಪದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ದೇಶದ್ರೋಹದ ಆರೋಪ ಎದುರಿಸುತ್ತಿರುವ ಉಮರ್ ಖಾಲಿದ್ ಫೋಟೋಗಳನ್ನು ಹಿಡಿದುಕೊಂಡು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಕೆಲವರು ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಪವಿತ್ರ ಹೋರಾಟವನ್ನು ಇಂತಹ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿರುವುದು ಖಂಡನೀಯ ಎಂದರು. ಇನ್ನು ನೀಟ್ ಅಕ್ರಮಗಳ ಗಂಭೀರತೆಯನ್ನು ಮನಗಂಡು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪರೀಕ್ಷಾ ಕ್ರಮದಲ್ಲಿ ಹಲವು ಪಾರದರ್ಶಕ ಹಾಗೂ ಕ್ರಾಂತಿಕಾರಿ ಸುಧಾರಣೆಗಳನ್ನು ಪ್ರಕಟಿಸಿದ್ದು, ಪೇಪರ್ ಲೀಕ್ ತಡೆಯಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಮರ್ಥಿಸಿಕೊಂಡರು.

ಗೃಹ ಸಚಿವರ ಕಾರ್ಯವೈಖರಿ ವಿರುದ್ಧ ವಾಗ್ದಾಳಿ, ಬಿ.ಕೆ. ಹರಿಪ್ರಸಾದ್‌ಗೆ ಟಾಂಗ್:

ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿರುವ ರಾಜ್ಯ ಸರ್ಕಾರದ ನಡೆಯನ್ನು ವಿಜಯೇಂದ್ರ ತೀವ್ರವಾಗಿ ಖಂಡಿಸಿದರು. ಬೆಂಗಳೂರಿನಲ್ಲಿ ಏನಾಗುತ್ತಿದೆ ಎಂಬ ಕನಿಷ್ಠ ಕಲ್ಪನೆಯೂ ಇಲ್ಲದಂತೆ ಗೃಹ ಸಚಿವರು ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, “ನೀವು ಕೇವಲ ಉಗ್ರಗಾಮಿಗಳಿಗೋ ಅಥವಾ ದೇಶದ್ರೋಹಿಗಳಿಗೋ ಗೃಹ ಸಚಿವರಲ್ಲ, ಬದಲಿಗೆ ಕರ್ನಾಟಕದ ಸಮಸ್ತ ಜನತೆಗೂ ಗೃಹ ಸಚಿವರು” ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ನಿರಂತರವಾಗಿ ಆರ್.ಎಸ್.ಎಸ್ ಸಂಸ್ಥೆಯ ವಿರುದ್ಧ ನೀಡುತ್ತಿರುವ ಹೇಳಿಕೆಗಳನ್ನು ವಿಜಯೇಂದ್ರ ತೀವ್ರವಾಗಿ ವ್ಯಂಗ್ಯವಾಡಿದರು. “ಆ ಪುಣ್ಯಾತ್ಮನಿಗೆ ಪ್ರತಿಯೊಂದಕ್ಕೂ ಆರ್.ಎಸ್.ಎಸ್ ಮೇಲೆ ಗೂಬೆ ಕೂರಿಸುವುದು ಬಿಟ್ಟರೆ, ದೇಶ ಅಥವಾ ರಾಜ್ಯದ ಅಭಿವೃದ್ಧಿ ಬಗ್ಗೆ ಬೇರೆ ಏನಾದರೂ ವಿಷಯ ಮಾತನಾಡಲು ಗೊತ್ತಿದೆಯಾ ಎಂದು ಯಾರಾದರೂ ಕೇಳಿ,” ಎಂದು ಕಟುವಾಗಿ ಟಾಂಗ್ ನೀಡಿದರು.

 

 


Share this with Friends

Related Post