Sat. Jul 25th, 2026

ಸರ್ಕಾರಿ ಜಮೀನು ಒತ್ತುವರಿಗೆ ಬೀಳಲಿದೆ ಬ್ರೇಕ್: ಗ್ರಾಮ ಪಂಚಾಯತಿಗಳಲ್ಲಿ ‘ಫಲವೃಕ್ಷೋದ್ಯಾನ’ ಅಭಿವೃದ್ಧಿಗೆ ಈಶ್ವರ ಖಂಡ್ರೆ ಮಾಸ್ಟರ್ ಪ್ಲಾನ್!

Share this with Friends

ಬೆಂಗಳೂರು: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಭೂಮಿಯ ಒತ್ತುವರಿಯನ್ನು ತಡೆಗಟ್ಟಲು ಮತ್ತು ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಹೊಸದೊಂದು ಪರಿಸರ ಸ್ನೇಹಿ ಯೋಜನೆಗೆ ಸಜ್ಜಾಗಿದೆ. ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಜಮೀನುಗಳಲ್ಲಿ ‘ಫಲವೃಕ್ಷೋದ್ಯಾನ’ (ಹಣ್ಣಿನ ತೋಟ) ಅಭಿವೃದ್ಧಿಪಡಿಸುವ ಕುರಿತು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಯವರಿಗೆ ಮಹತ್ವದ ಸೂಚನೆ ನೀಡಿದ್ದಾರೆ.

ಈ ಯೋಜನೆಯನ್ನು ಕಂದಾಯ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ವಿಬಿಜಿ ರಾಮ್ ಜಿ (VBG Ram Ji) ಸಹಯೋಗದೊಂದಿಗೆ ಕ್ರಿಯಾಯೋಜನೆ ರೂಪಿಸಲು ಸಚಿವರು ನಿರ್ದೇಶನ ನೀಡಿದ್ದಾರೆ.

ಸ್ಥಳೀಯ ಯುವಕರಿಗೆ ವಾರ್ಷಿಕ ಗುತ್ತಿಗೆ; ಪಂಚಾಯತ್‌ಗೆ ಆದಾಯ

ಸಚಿವರ ಪತ್ರದ ಪ್ರಕಾರ, ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಭೂಮಿಯಲ್ಲಿ ಮಾವು, ಸಪೋಟ, ಬೆಟ್ಟನೆಲ್ಲಿಕಾಯಿ, ತೆಂಗು, ಹೈಬ್ರಿಡ್ ನೇರಳೆ ಹಾಗೂ ಹುಣಸೆ ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಸಲಾಗುತ್ತದೆ. ಈ ರೀತಿ ಅಭಿವೃದ್ಧಿಪಡಿಸಿದ ತೋಟಗಳನ್ನು ವಾರ್ಷಿಕ ಆಧಾರದ ಮೇಲೆ ಅತ್ಯಂತ ಪಾರದರ್ಶಕವಾಗಿ ಹರಾಜು ಪ್ರಕ್ರಿಯೆಯ ಮೂಲಕ ಅದೇ ಗ್ರಾಮದ ನಿರುದ್ಯೋಗಿ ಮತ್ತು ಭೂರಹಿತ ಯುವಜನರಿಗೆ ಗುತ್ತಿಗೆ ನೀಡಲಾಗುವುದು. ಇದರಿಂದ ಸ್ಥಳೀಯ ಯುವಕರಿಗೆ ಸ್ವಯಂ ಉದ್ಯೋಗ ಸಿಗಲಿದ್ದು, ಗ್ರಾಮ ಪಂಚಾಯತಿ ಹಾಗೂ ಕಂದಾಯ ಇಲಾಖೆಗೆ ಹೆಚ್ಚುವರಿ ಆದಾಯ ಹರಿದು ಬರಲಿದೆ.

ರಸ್ತೆ ಬದಿಯಲ್ಲೂ ಬೆಳೆಯಲಿವೆ ಆದಾಯ ತರುವ ಮರಗಳು

ಕೇವಲ ಖಾಲಿ ಜಮೀನು ಮಾತ್ರವಲ್ಲದೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ ಗ್ರಾಮೀಣ ಸಂಪರ್ಕ ರಸ್ತೆಗಳ ಎರಡೂ ಬದಿಯಲ್ಲಿ ಹುಣಸೆ ಮತ್ತು ಮಾವಿನ ಮರಗಳನ್ನು ನೆಡಲು ಯೋಜಿಸಲಾಗಿದೆ. ಇವುಗಳನ್ನು ಸಹ ವಾರ್ಷಿಕ ಆಧಾರದಲ್ಲಿ ಸ್ಥಳೀಯರಿಗೆ ಹರಾಜು ಮೂಲಕ ಗುತ್ತಿಗೆ ನೀಡಲು ಸೂಚಿಸಲಾಗಿದ್ದು, ಈ ಆದಾಯವನ್ನು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಬಹುದು ಎಂದು ಸಚಿವರು ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.

ಯೋಜನೆಯ 5 ಪ್ರಮುಖ ಪ್ರಯೋಜನಗಳು:

ಒತ್ತುವರಿಗೆ ಮುಕ್ತಿ: ಸರ್ಕಾರಿ ಜಮೀನುಗಳು ದುರುಪಯೋಗವಾಗುವುದನ್ನು ಮತ್ತು ಒತ್ತುವರಿಯಾಗುವುದನ್ನು ಇದು ಸಂಪೂರ್ಣವಾಗಿ ತಡೆಯುತ್ತದೆ.

ಹಸಿರು ಹೊದಿಕೆ ವೃದ್ಧಿ: ಗ್ರಾಮೀಣ ಭಾಗದಲ್ಲಿ ಸಸ್ಯ ಸಂಪತ್ತು ಹೆಚ್ಚಾಗಿ ಪರಿಸರ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ.

ಆಹಾರದ ಆಶ್ರಯ: ಹಣ್ಣಿನ ಮರಗಳಿಂದಾಗಿ ಹಕ್ಕಿ-ಪಕ್ಷಿ ಹಾಗೂ ಸಣ್ಣಪುಟ್ಟ ಜೀವಿಗಳಿಗೆ ನೈಸರ್ಗಿಕ ಆಹಾರ ಲಭ್ಯವಾಗಲಿದೆ.

ಉದ್ಯೋಗ ಸೃಷ್ಟಿ: ಗ್ರಾಮದ ನಿರುದ್ಯೋಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಭೂರಹಿತ ಯುವಕರಿಗೆ ಜೀವನೋಪಾಯ ಸಿಗಲಿದೆ.

ಸರ್ಕಾರಕ್ಕೆ ಭೂಮಿ ಲಭ್ಯತೆ: ಈ ತೋಟಗಳ ಮರಗಳನ್ನು ಯಾವಾಗ ಬೇಕಾದರೂ ತೆರವುಗೊಳಿಸಬಹುದಾಗಿದ್ದರಿಂದ, ಮುಂದಿನ ದಿನಗಳಲ್ಲಿ ಸರ್ಕಾರದ ತುರ್ತು ಯೋಜನೆಗಳಿಗೆ ಭೂಮಿ ಬಳಸಿಕೊಳ್ಳಲು ಯಾವುದೇ ಕಾನೂನು ತೊಡಕು ಇರುವುದಿಲ್ಲ.

 

 


Share this with Friends

Related Post