ಮೈಸೂರು: ಈ ಬಾರಿಯ ದಸರಾದಲ್ಲಿ ಕರಾವಳಿ ಭಾಗದ ಜಾನಪದ ಕ್ರೀಡೆಯಾದ ‘ಕಂಬಳ’ವನ್ನು ಆಯೋಜಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಕಂಬಳ ಆಯೋಜನೆ ಖಚಿತವಾದರೆ ಅದಕ್ಕಾಗಿ 18ನೇ ಉಪಸಮಿತಿಯನ್ನು ರಚಿಸಲಾಗುವುದು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ‘ಸೈಕ್ಲಿಂಗ್ ವೆಲೋಡ್ರೋಮ್’ ಪ್ರದೇಶವನ್ನು ಕಂಬಳಕ್ಕಾಗಿ ಪರಿಶೀಲಿಸಲಾಗಿದ್ದು, ಮುಖ್ಯಮಂತ್ರಿಗಳ ಅಂತಿಮ ಸೂಚನೆಯ ನಂತರ ನಿರ್ಧಾರ ಹೊರಬೀಳಲಿದೆ ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪೂರ್ವಸಿದ್ಧತೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಕಾರಿ ಸಭೆ ಜರುಗಿತು. ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಈ ಬಾರಿಯ ನಾಡಹಬ್ಬವನ್ನು ವ್ಯವಸ್ಥಿತ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲು ಕೈಗೊಂಡಿರುವ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದರು.
17 ಉಪಸಮಿತಿಗಳ ರಚನೆ
ದಸರಾ ಮಹೋತ್ಸವದ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಲು ಈ ಬಾರಿ ಒಟ್ಟು 17 ಉಪಸಮಿತಿಗಳನ್ನು ರಚಿಸಲು ಸಭೆಯಲ್ಲಿ ಅಧಿಕೃತವಾಗಿ ನಿರ್ಧರಿಸಲಾಗಿದೆ. ಸಭೆಯಲ್ಲಿ ಬಂದಿರುವ ಪ್ರಮುಖ ಸಲಹೆಗಳನ್ನು ಪರಿಶೀಲಿಸಿ, ಈ ಸಮಿತಿಗಳಿಗೆ ಶೀಘ್ರದಲ್ಲೇ ಪದಾಧಿಕಾರಿಗಳನ್ನು ಮತ್ತು ಅಧಿಕಾರಿಗಳನ್ನು ನೇಮಿಸಲಾಗುವುದು ಎಂದರು.
ಕಂಬಳ ಆಯೋಜನೆ: ಅಂತಿಮ ತೀರ್ಮಾನ ಬಾಕಿ
ಮೈಸೂರು ದಸರಾ ಅಂಗವಾಗಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಒಂದು ವೇಳೆ ಕಂಬಳ ಆಯೋಜನೆಗೆ ಒಪ್ಪಿಗೆ ಸಿಕ್ಕರೆ, ಅದಕ್ಕಾಗಿ ಸಾತಗಳ್ಳಿ ಪ್ರದೇಶವನ್ನು ಈಗಾಗಲೇ ಗುರುತಿಸಲಾಗಿದೆ. ಆದರೆ ಈ ವಿಷಯದ ಕುರಿತು ಯಾವುದೇ ಅಂತಿಮ ತೀರ್ಮಾನವಾಗಿಲ್ಲದ ಕಾರಣ, ಸಂಪೂರ್ಣ ಜವಾಬ್ದಾರಿಯನ್ನು ಮುಖ್ಯಮಂತ್ರಿಯವರ ಅಂತಿಮ ನಿರ್ಧಾರಕ್ಕೆ ಬಿಡಲಾಗಿದೆ ಎಂದರು.
90 ದಿನಗಳ ಕಾಲ ದಸರಾ ವಸ್ತುಪ್ರದರ್ಶನ
ಈ ಬಾರಿಯ ದಸರಾ ವಸ್ತುಪ್ರದರ್ಶನವು ಹಬ್ಬದ ಉದ್ಘಾಟನೆಯ ದಿನದಿಂದಲೇ ಆರಂಭವಾಗಲಿದ್ದು, ಒಟ್ಟು 90 ದಿನಗಳ ಕಾಲ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ. ಸಾರ್ವಜನಿಕರ ಸ್ಪಂದನೆ ಮತ್ತು ಪ್ರವಾಸಿಗರ ಹರಿವನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಇದರ ಅವಧಿಯನ್ನು ಮತ್ತಷ್ಟು ವಿಸ್ತರಿಸುವ ಮುಕ್ತ ಅವಕಾಶವನ್ನು ಕಾಯ್ದಿರಿಸಲಾಗಿದೆ ಎಂದರು.
ಉದ್ಘಾಟಕರು ಯಾರು? ಸಿಎಂ ನಿರ್ಧಾರ
ನಾಡಹಬ್ಬ ದಸರಾವನ್ನು ಯಾರು ಉದ್ಘಾಟಿಸಬೇಕು ಎಂಬ ಕುರಿತು ಸಭೆಯಲ್ಲಿ ಹಲವು ಗಣ್ಯರ ಹೆಸರುಗಳು ಪ್ರಸ್ತಾಪವಾಗಿವೆ. ಈ ಪೈಕಿ ಕೆಲವು ಪ್ರಮುಖ ಧಾರ್ಮಿಕ ಸಂಸ್ಥೆಗಳ ಹೆಸರೂ ಕೇಳಿಬಂದಿದೆ. ಆದರೆ, ದಸರಾ ಉದ್ಘಾಟಕರ ಹೆಸರನ್ನು ಅಂತಿಮಗೊಳಿಸುವ ಸರ್ವಾಧಿಕಾರವನ್ನು ಮುಖ್ಯಮಂತ್ರಿಯವರಿಗೆ ವಹಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಮೈಸೂರು ನಗರದಲ್ಲಿ ಪ್ರಸ್ತುತ ನಡೆಯುತ್ತಿರುವ ಫ್ಲೈಓವರ್, ವೈಟ್ ಟಾಪಿಂಗ್ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪೈಕಿ ದಸರಾಗೂ ಮುನ್ನ ಮುಗಿಯುವ ಕೆಲಸಗಳನ್ನು ತಕ್ಷಣ ಪೂರ್ಣಗೊಳಿಸಲು ಸೂಚಿಸಲಾಗಿದೆ. ದಸರಾ ವೇಳೆಗೆ ಮುಗಿಯದ ದೀರ್ಘಾವಧಿಯ ಕಾಮಗಾರಿಗಳನ್ನು ಹಬ್ಬದ ದಿನಗಳಲ್ಲಿ ನಿಲ್ಲಿಸಿ, ಸಾರ್ವಜನಿಕರ ಹಾಗೂ ಪ್ರವಾಸಿಗರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ಈ ಬಾರಿ ಡ್ರೋನ್ ಶೋ ಅನ್ನು ಮತ್ತಷ್ಟು ವಿನೂತನವಾಗಿ ಆಯೋಜಿಸಲಾಗುವುದು. ಜೊತೆಗೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕರೆ ಏರ್ ಶೋ ಕೂಡ ನಡೆಸಲಾಗುವುದು ಎಂದರು.
ದಸರಾ ವೀಕ್ಷಣೆಯ ‘ಗೋಲ್ಡ್ ಪಾಸ್’ ಗೊಂದಲಗಳಿಗೆ ತೆರೆ ಎಳೆಯಲು, ಆಸನಗಳ ಸಂಖ್ಯೆಗೆ ತಕ್ಕಂತೆ ಮಾತ್ರ ಪಾಸ್‌ಗಳನ್ನು ಮುದ್ರಿಸಿ, ಹಣ ನೀಡಿ ಖರೀದಿಸುವ ಸಾರ್ವಜನಿಕರಿಗೆ ಮಾತ್ರ ನೀಡಲಾಗುವುದು. ವಿಐಪಿಗಳಿಗೆ ಉಚಿತ ಗೋಲ್ಡ್ ಪಾಸ್ ನೀಡದಿರಲು ನಿರ್ಧರಿಸಲಾಗಿದೆ ಎಂದರು.
ಅಧಿಕಾರಿಗಳು ದಸರಾ ಮತ್ತು ಎಸ್‌ಐಆರ್ ಕೆಲಸಗಳಲ್ಲಿ ನಿರತರಾಗಿದ್ದರೂ, ದಿನನಿತ್ಯದ ಸಾರ್ವಜನಿಕ ಕೆಲಸ-ಕಾರ್ಯಗಳಿಗೆ ಯಾವುದೇ ರೀತಿಯ ಭಂಗ ಬರಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.ದಸರಾ ನಮ್ಮ ರಾಜ್ಯದ ಹೆಮ್ಮೆ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ನೀಡಿದ ನೈರ್ಮಲ್ಯ, ಮಹಿಳೆಯರ ಸುರಕ್ಷತೆ, ತಾಲೂಕು ಮಟ್ಟದ ಕ್ರೀಡೋತ್ಸವಗಳಂತಹ ಉತ್ತಮ ಸಲಹೆಗಳನ್ನು ಪರಿಗಣಿಸಿ ಈ ಬಾರಿಯ ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.

