Mon. Jul 27th, 2026

ಮಂಡ್ಯ ಜನತೆಗೆ ಸಿಹಿ ಸುದ್ದಿ: ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಯತ್ನಕ್ಕೆ ಒಲಿದ ‘ಆಧಾರ್ ಸೇವಾ ಕೇಂದ್ರ’

Share this with Friends

ಮಂಡ್ಯ: ಜಿಲ್ಲೆಯ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಸುಸಜ್ಜಿತ ‘ಆಧಾರ್ ಸೇವಾ ಕೇಂದ್ರ’ (ASK) ಸ್ಥಾಪನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಮಂಡ್ಯ ಜಿಲ್ಲೆಗೆ 4 ಇಸಿಎಂಪಿ (ECMP) ಕಿಟ್‌ಗಳನ್ನು ಒಳಗೊಂಡ ಹೊಸ ಆಧಾರ್ ಸೇವಾ ಕೇಂದ್ರವನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರಿಗೆ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಹಾಗೂ ಬಯೋಮೆಟ್ರಿಕ್ ಅಪ್‌ಡೇಟ್ ಸೇವೆಗಳನ್ನು ಸುಲಭವಾಗಿ ಒದಗಿಸುವ ನಿಟ್ಟಿನಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ವಿಶೇಷ ಮನವಿ ಸಲ್ಲಿಸಿದ್ದರು. ಈ ಮನವಿಗೆ ತಕ್ಷಣ ಸ್ಪಂದಿಸಿರುವ ಯುಐಡಿಎಐ (UIDAI) ಮಂಡ್ಯಕ್ಕೆ ಹೊಸ ಕೇಂದ್ರವನ್ನು ಮಂಜೂರು ಮಾಡಿ ಆದೇಶಿಸಿದೆ.

ಪ್ರಧಾನಿ ಮೋದಿ, ಸಚಿವ ಅಶ್ವಿನಿ ವೈಷ್ಣವ್‌ಗೆ ಕೃತಜ್ಞತೆ

ಈ ಮಹತ್ವದ ನಿರ್ಧಾರದ ಕುರಿತು ಹರ್ಷ ವ್ಯಕ್ತಪಡಿಸಿರುವ ಹೆಚ್‌ಡಿಕೆ, “ಜನಸ್ನೇಹಿ ಆಡಳಿತಕ್ಕೆ ಬದ್ಧವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಹಾಗೆಯೇ ನನ್ನ ಮನವಿಯನ್ನು ಪುರಸ್ಕರಿಸಿ, ಮಂಡ್ಯ ಜನತೆಗೆ ಈ ಡಿಜಿಟಲ್ ಸೌಲಭ್ಯ ಕಲ್ಪಿಸಿಕೊಟ್ಟ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೂ ಧನ್ಯವಾದ ಸಮರ್ಪಿಸುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ.

ಮಂಡ್ಯದಲ್ಲಿ ಸ್ಥಾಪನೆಯಾಗಲಿರುವ ಈ ಹೈಟೆಕ್ ಆಧಾರ್ ಸೇವಾ ಕೇಂದ್ರವು ಗ್ರಾಮೀಣ ಮಟ್ಟದಲ್ಲಿ ‘ಡಿಜಿಟಲ್ ಇಂಡಿಯಾ’ ಉಪಕ್ರಮವನ್ನು ಇನ್ನಷ್ಟು ಬಲಪಡಿಸಲಿದೆ. ಸಾರ್ವಜನಿಕರು ಇನ್ಮುಂದೆ ಆಧಾರ್ ಸೇವೆಗಳಿಗಾಗಿ ಬೆಂಗಳೂರು ಅಥವಾ ಇತರ ನಗರಗಳಿಗೆ ಅಲೆಯುವುದು ತಪ್ಪಲಿದ್ದು, ಸ್ಥಳೀಯವಾಗಿಯೇ ತಂತ್ರಜ್ಞಾನ ಆಧಾರಿತ ಸೇವೆಗಳು ಲಭ್ಯವಾಗಲಿವೆ.

 

 


Share this with Friends

Related Post