Mon. Jul 27th, 2026

ಗ್ರಾಮೀಣ ಯುವಜನತೆಗೆ ಎಐ ತಂತ್ರಜ್ಞಾನದ ಸ್ಪರ್ಶ: ಮುದ್ದೇನಹಳ್ಳಿಯಲ್ಲಿ ಹೈಟೆಕ್ ಕೌಶಲ್ಯ ಕೇಂದ್ರ ಉದ್ಘಾಟನೆ

Share this with Friends

ಚಿಕ್ಕಬಳ್ಳಾಪುರ: ಕೃತಕ ಬುದ್ಧಿಮತ್ತೆಯ (AI)ಂತಹ ನೂತನ ತಂತ್ರಜ್ಞಾನಗಳು ಕೇವಲ ಮಹಾನಗರಗಳಿಗೆ ಮಾತ್ರ ಸೀಮಿತವಾಗಬಾರದು. ಇದು ಹಳ್ಳಿಯ ಕಟ್ಟಕಡೆಯ ಪ್ರತಿಭಾವಂತ ಯುವಜನತೆಗೂ ಸಿಕ್ಕಾಗ ಮಾತ್ರ ಭಾರತದ ನೈಜ ಪ್ರಗತಿ ಸಾಧ್ಯ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಭಿಪ್ರಾಯಪಟ್ಟಿದ್ದಾರೆ.

ತಾಲೂಕಿನ ಮುದ್ದೇನಹಳ್ಳಿಯ ಪವಿತ್ರ ಸತ್ಯಸಾಯಿ ಗ್ರಾಮದಲ್ಲಿ ನೂತನವಾಗಿ ಆರಂಭಿಸಲಾಗಿರುವ ‘ರೂರಲ್ ಶೋರ್ಸ್ AI ಕೌಶಲ್ಯ ಮತ್ತು ಅನುಭವ ಕೇಂದ್ರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾನವೀಯತೆಯುಳ್ಳ ತಂತ್ರಜ್ಞಾನ ಇಂದಿನ ಅಗತ್ಯ

ವೇಗವಾಗಿ ಬದಲಾಗುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನಕ್ಕೆ ಕರುಣೆ, ಸದ್ಗುಣ ಮತ್ತು ನೈತಿಕತೆಯ ತಳಹದಿ ಇರಬೇಕು. ತಂತ್ರಜ್ಞಾನವು ಮಾನವನ ಬುದ್ಧಿಮತ್ತೆಯನ್ನು ವೃದ್ಧಿಸುವ ಜೊತೆಗೆ ಸಮಾಜಮುಖಿಯಾಗಿರಬೇಕು. ಸತ್ಯಸಾಯಿ ಗ್ರಾಮದಂತಹ ಉನ್ನತ ಸೇವಾ ಮನೋಭಾವದ ಆವರಣದಲ್ಲಿ ಇಂತಹ ಹೈಟೆಕ್ ತರಬೇತಿ ಕೇಂದ್ರ ತಲೆಯೆತ್ತಿರುವುದು ಅತ್ಯಂತ ಸ್ತುತ್ಯರ್ಹ ಎಂದರು.

ಗ್ರಾಮೀಣ ವಲಸೆ ತಡೆದ ‘ರೂರಲ್ ಶೋರ್ಸ್’

ಹಳ್ಳಿಗಳ ಯುವಕ-ಯುವತಿಯರು ಕೇವಲ ಉದ್ಯೋಗಕ್ಕಾಗಿ ಬೆಂಗಳೂರಿನಂತಹ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ರೂರಲ್ ಶೋರ್ಸ್ ಸಂಸ್ಥೆ ಕಳೆದ 18 ವರ್ಷಗಳಿಂದ ಮಹತ್ತರ ಪಾತ್ರ ವಹಿಸಿದೆ. ಗ್ರಾಮೀಣ ಭಾಗದಲ್ಲೇ ಉದ್ಯೋಗಾವಕಾಶ ಸೃಷ್ಟಿಸುವ ಮೂಲಕ ಇದುವರೆಗೆ 30,000ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ಮತ್ತು ಕೆಲಸ ನೀಡಲಾಗಿದೆ. ಅಷ್ಟೇ ಅಲ್ಲದೆ, ಅಮೆರಿಕದಲ್ಲೂ ‘ಪೀಪಲ್‌ಶೋರ್ಸ್’ ಮೂಲಕ ನೂರಾರು ಮಹಿಳೆಯರಿಗೆ ಉದ್ಯೋಗ ನೀಡಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.

ಸದ್ಗುರುಗಳ ಉಚಿತ ಸೇವಾ ಕಾರ್ಯಗಳಿಗೆ ಪ್ರಶಂಸೆ

ಉಚಿತ ಗುಣಮಟ್ಟದ ಶಿಕ್ಷಣ, ಅತ್ಯಾಧುನಿಕ ಆರೋಗ್ಯ ಸೇವೆ ಮತ್ತು ಪೌಷ್ಟಿಕ ಆಹಾರವನ್ನು ಸಮಾಜದ ಬಡವರಿಗೆ ತಲುಪಿಸುತ್ತಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ದೂರದೃಷ್ಟಿಯನ್ನು ಮುಖ್ಯ ಕಾರ್ಯದರ್ಶಿಗಳು ಮುಕ್ತಕಂಠದಿಂದ ಕೊಂಡಾಡಿದರು. ಭಾರತದ ಮೊದಲ ಸಂಪೂರ್ಣ ಉಚಿತ ಗ್ರಾಮೀಣ ವೈದ್ಯಕೀಯ ಕಾಲೇಜು ಸೇರಿದಂತೆ ಮುದ್ದೇನಹಳ್ಳಿಯಲ್ಲಿ ನಡೆಯುತ್ತಿರುವ ಕ್ರಾಂತಿಕಾರಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ ಎಂದು ಅವರು ತಿಳಿಸಿದರು.

ತಂತ್ರಜ್ಞಾನ ರಾಜಧಾನಿಯಾಗಿ ಕರ್ನಾಟಕದ ಕೊಡುಗೆ:

“ಕರ್ನಾಟಕವು ದೇಶದ ತಂತ್ರಜ್ಞಾನ ರಾಜಧಾನಿಯಾಗಿ ಬೆಳೆಯುತ್ತಿದ್ದು, ಇಂತಹ AI ಕೌಶಲ್ಯ ಕೇಂದ್ರಗಳು ಗ್ರಾಮೀಣ ಯುವಕರನ್ನು ಭವಿಷ್ಯದ ತಂತ್ರಜ್ಞಾನಕ್ಕೆ ಸಜ್ಜುಗೊಳಿಸಲಿವೆ. ಭಾರತವು ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಾಯಕತ್ವ ವಹಿಸಲು ಗ್ರಾಮೀಣ ಭಾಗದ ಪ್ರತಿಭೆಗಳ ಕೊಡುಗೆ ಅಪಾರವಾಗಲಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

​ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಜಿ, ರೂರಲ್ ಶೋರ್ಸ್ ಸಂಸ್ಥೆಯ ನಿರ್ದೇಶಕರು, ಗಣ್ಯರು, ದೇಶ-ವಿದೇಶಗಳ ಭಕ್ತಾದಿಗಳು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

 


Share this with Friends

Related Post