ಬೆಂಗಳೂರು: ರಾಜ್ಯದ ಕ್ರೀಡಾಪಟುಗಳ ಉನ್ನತ ಸಾಧನೆಗೆ ಪೂರಕವಾಗಿ ವೈಜ್ಞಾನಿಕ ಬೆಂಬಲ ಹಾಗೂ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬೃಹತ್ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಕೇವಲ ಚಿಕಿತ್ಸೆಗೆ ಸೀಮಿತವಾಗದ ಫಿಸಿಯೋಥೆರಪಿ ಕ್ಷೇತ್ರವನ್ನು ಉತ್ತೇಜಿಸುವ ಮೂಲಕ ಕರ್ನಾಟಕವನ್ನು ಈ ವಿಭಾಗದ ಶ್ರೇಷ್ಠ ಕೇಂದ್ರವನ್ನಾಗಿ ರೂಪಿಸಲು ಸಂಕಲ್ಪ ಮಾಡಲಾಗಿದೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಪ್ರಕಟಿಸಿದ್ದಾರೆ.
ಕ್ರೀಡಾಪಟುಗಳ ವೃತ್ತಿಪರ ಬೆಳವಣಿಗೆಗೆ ಪೂರಕವಾಗಿ ಸರ್ಕಾರ ಕೈಗೊಳ್ಳಲಿರುವ ಪ್ರಮುಖ ಕ್ರಮಗಳ ಕುರಿತು ಮಾಹಿತಿ ನೀಡಿದ ಡಿಸಿಎಂ,ಕೃಷಿ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದ ದಿನಗಳಲ್ಲಿ ತಾವೊಬ್ಬ ಕ್ರೀಡಾಪಟುವಾಗಿದ್ದು, 100 ಮೀಟರ್ ಓಟವನ್ನು ಕೇವಲ 10.9 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸಿದ್ದ ಹಳೆಯ ನೆನಪನ್ನು ಹಂಚಿಕೊಂಡ ಸಚಿವರು, ಅಂದಿನ ಕಾಲದ ಕ್ರೀಡಾಪಟುಗಳಿಗೆ ಇಂತಹ ವೃತ್ತಿಪರ ಫಿಸಿಯೋಥೆರಪಿ ಮತ್ತು ಕ್ರೀಡಾ ವಿಜ್ಞಾನದ (Sports Science) ಬೆಂಬಲ ಸಿಕ್ಕಿದ್ದರೆ ಸಾಧನೆಗಳು ಮತ್ತಷ್ಟು ಉನ್ನತ ಮಟ್ಟಕ್ಕೇರುತ್ತಿದ್ದವು ಎಂಬ ವೈಯಕ್ತಿಕ ಅನುಭವವನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಇನ್ಮುಂದೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಕ್ರೀಡಾಪಟುಗಳಿಗೆ ಜಿಲ್ಲಾ ಮಟ್ಟದಲ್ಲೇ ಸಮಯೋಚಿತವಾಗಿ ವೃತ್ತಿಪರ ಫಿಸಿಯೋಥೆರಪಿ ಚಿಕಿತ್ಸೆ ಹಾಗೂ ವೈಜ್ಞಾನಿಕ ತರಬೇತಿ ಸಿಗುವಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.
₹5,000 ಕೋಟಿ ವೆಚ್ಚದ ಕಂಠೀರವ ಕ್ರೀಡಾ ಸಂಕೀರ್ಣ ಪ್ರಸ್ತಾವನೆ
ಬೆಂಗಳೂರಿನ ಐತಿಹಾಸಿಕ ಕಂಠೀರವ ಕ್ರೀಡಾಂಗಣವನ್ನು ಬರೋಬ್ಬರಿ ₹5,000 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಅತ್ಯಾಧುನಿಕ ಕ್ರೀಡಾ ಸಂಕೀರ್ಣವಾಗಿ ಅಭಿವೃದ್ಧಿಪಡಿಸುವ ಬೃಹತ್ ಪ್ರಸ್ತಾವನೆ ಸರ್ಕಾರದ ಮುಂದಿದೆ. ಈ ಯೋಜನೆಯ ಪ್ರಮುಖ ಭಾಗವಾಗಿ ಕ್ರೀಡಾಂಗಣದ ಆವರಣದಲ್ಲೇ ಫಿಸಿಯೋಥೆರಪಿ ಮತ್ತು ಸ್ಪೋರ್ಟ್ಸ್ ಸೈನ್ಸ್ಗೆಂದೇ ಮೀಸಲಾದ ಹೈಟೆಕ್ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು.ಈ ಮಹತ್ವಾಕಾಂಕ್ಷಿ ಮಾಸ್ಟರ್ ಪ್ಲಾನ್ ಮೂಲಕ ಬೆಂಗಳೂರನ್ನು ಕ್ರೀಡಾ ವೈದ್ಯಕೀಯ (Sports Medicine), ಫಿಸಿಯೋಥೆರಪಿ ಹಾಗೂ ಕ್ರೀಡಾಪಟುಗಳ ಪುನರ್ವಸತಿ (Rehabilitation) ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹೆಮ್ಮೆಯ ಹಬ್ ಆಗಿ ಪರಿವರ್ತಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಡಾ. ಜಿ. ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

