Fri. Jul 31st, 2026

ಮಂಗಳೂರಿನಿಂದ ಶೀಘ್ರದಲ್ಲೇ ಐಷಾರಾಮಿ ಕ್ರೂಸ್ ಹಡಗು ಸೇವೆ? ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಕಳೆ ತರಲು ಸಜ್ಜಾದ ಇಲಾಖೆ!

Share this with Friends

ಬೆಂಗಳೂರು: ಕರ್ನಾಟಕದ ಸುಂದರ ಕರಾವಳಿ ತೀರದಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಮಂಗಳೂರಿನಿಂದ ಐಷಾರಾಮಿ ಕ್ರೂಸ್ (ಪ್ರವಾಸಿ ಹಡಗು) ಸೇವೆಗಳನ್ನು ಆರಂಭಿಸಲು ಪ್ರವಾಸೋದ್ಯಮ ಇಲಾಖೆಯು ದೇಶದ ಮುಂಚೂಣಿ ಕ್ರೂಸ್ ಕಾರ್ಯಾಚರಣೆ ಸಂಸ್ಥೆಗಳೊಂದಿಗೆ ಮಹತ್ವದ ಮಾತುಕತೆ ಆರಂಭಿಸಿದೆ.

ಮುಂಬೈನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಭಾರತದ ಪ್ರಮುಖ ಕ್ರೂಸ್ ಸಂಸ್ಥೆಯು ಮಂಗಳೂರಿನಿಂದ ಈ ಜಲ ಸಾರಿಗೆ ಪ್ರವಾಸೋದ್ಯಮ ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲು ತಾತ್ವಿಕ ಒಪ್ಪಿಗೆ ನೀಡಿದೆ.

ಪ್ರವಾಸೋದ್ಯಮ ಇಲಾಖೆಯ ಉನ್ನತಾಧಿಕಾರಿಗಳ ನೇತೃತ್ವದ ನಿಯೋಗವು ಮುಂಬೈನಲ್ಲಿ ಪ್ರಮುಖ ಕ್ರೂಸ್ ಸಂಸ್ಥೆಯ ಉನ್ನತ ಪ್ರತಿನಿಧಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದೆ. ಮಂಗಳೂರಿನಿಂದ ಕ್ರೂಸ್ ಹಡಗುಗಳನ್ನು ಓಡಿಸಲು ಅಗತ್ಯವಿರುವ ಬಂದರು ಮೂಲಸೌಕರ್ಯ, ಮಾರುಕಟ್ಟೆ ಅವಕಾಶಗಳು ಮತ್ತು ಕಾರ್ಯಾಚರಣೆಯ ಸೌಲಭ್ಯಗಳ ಕುರಿತು ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗಿದೆ.

ಈ ಸಂದರ್ಭದಲ್ಲಿ ಮಂಗಳೂರು ಕರಾವಳಿಯ ಪ್ರವಾಸೋದ್ಯಮ ಮಾರುಕಟ್ಟೆ ಮತ್ತು ಪ್ರವಾಸಿಗರ ಬೇಡಿಕೆಯ ಬಗ್ಗೆ ವಿವರವಾದ ಅಧ್ಯಯನ ನಡೆಸಲು ತೀರ್ಮಾನಿಸಲಾಗಿದೆ. ಇದರೊಂದಿಗೆ ಮಂಗಳೂರು ಕರಾವಳಿಯನ್ನು ಜಾಗತಿಕ ಮತ್ತು ದೇಶೀಯ ಮಟ್ಟದಲ್ಲಿ ಪ್ರಚಾರ ಮಾಡಲು ವಿಶೇಷ ಕಾರ್ಯತಂತ್ರಗಳನ್ನು ರೂಪಿಸಲು ಉದ್ದೇಶಿಸಲಾಗಿದೆ.

ಮುಂದಿನ ತಿಂಗಳು ತಾಂತ್ರಿಕ ತಂಡದ ಭೇಟಿ:

ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಮುಂದಿನ ತಿಂಗಳು ಕ್ರೂಸ್ ಸಂಸ್ಥೆಯ ವಿಶೇಷ ತಾಂತ್ರಿಕ ತಂಡವು ಮಂಗಳೂರಿಗೆ ಭೇಟಿ ನೀಡಲಿದೆ.

ಈ ತಂಡವು ಸ್ಥಳೀಯ ಬಂದರಿನ ಸೌಕರ್ಯಗಳು, ಪ್ರವಾಸೋದ್ಯಮ ಸಾಮರ್ಥ್ಯ ಮತ್ತು ಹಡಗು ಕಾರ್ಯಾಚರಣೆಯ ಪ್ರಾಯೋಗಿಕ ಸಾಧ್ಯತೆಗಳ ಕುರಿತು ಸಮಗ್ರ ಸ್ಥಳ ಪರಿಶೀಲನೆ (ರೆಕ್ಕಿ) ನಡೆಸಲಿದೆ.

ರಾಜ್ಯ ಸರ್ಕಾರದ ಬದ್ಧತೆ:

ಈ ಮಹತ್ವದ ಯೋಜನೆ ಕುರಿತು ಮಾತನಾಡಿದ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆಜೆ ಜಾರ್ಜ್, “ಕರ್ನಾಟಕದ ಕರಾವಳಿ ಪ್ರದೇಶವು ಕ್ರೂಸ್ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳನ್ನು ಹೊಂದಿದೆ. ರಾಜ್ಯದಲ್ಲಿ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

“ಉದ್ಯಮದ ಪ್ರಮುಖ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಅಗತ್ಯ ಮೂಲಸೌಕರ್ಯ ಹಾಗೂ ಅನುಕೂಲಕರ ಪರಿಸರ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ದೊರೆಯಲಿದ್ದು, ಸ್ಥಳೀಯವಾಗಿ ಉದ್ಯೋಗ ಮತ್ತು ಹೂಡಿಕೆ ಅವಕಾಶಗಳೂ ಹೆಚ್ಚಲಿವೆ” ಎಂದು ಸಚಿವರು ಭರವಸೆ ನೀಡಿದ್ದಾರೆ.

ಮುಂದಿನ ಹಂತದ ಕ್ರಮಗಳು:

ಯೋಜನೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿರುವ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ.ರಾಮ್ ಪ್ರಸಾತ್ ಮನೋಹರ್, “ಮಂಗಳೂರಿನಿಂದ ಕ್ರೂಸ್ ಸೇವೆ ಆರಂಭಿಸಲು ದೇಶದ ಮುಂಚೂಣಿ ಕ್ರೂಸ್ ಕಾರ್ಯಾಚರಣೆ ಸಂಸ್ಥೆಯು ತಾತ್ವಿಕ ಒಪ್ಪಿಗೆ ಸೂಚಿಸಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ” ಎಂದಿದ್ದಾರೆ.

“ಮುಂದಿನ ಹಂತದಲ್ಲಿ ಸಂಸ್ಥೆಯ ತಾಂತ್ರಿಕ ತಂಡವು ಸ್ಥಳ ಪರಿಶೀಲನೆ ನಡೆಸಲಿದ್ದು, ಅವರ ವರದಿಯ ಆಧಾರದ ಮೇಲೆ ಮುಂದಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದೇ ವೇಳೆ, ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೂಸ್ ಟರ್ಮಿನಲ್ ನಿರ್ಮಾಣದ ಸಾಧ್ಯತೆಗಳನ್ನೂ ಇಲಾಖೆ ಗಂಭೀರವಾಗಿ ಪರಿಶೀಲಿಸುತ್ತಿದೆ” ಎಂದು ಅವರು ತಿಳಿಸಿದ್ದಾರೆ.

ಮಂಗಳೂರು ಬಂದರಿನಲ್ಲಿ ಜಾಗತಿಕ ಮಟ್ಟದ ಟರ್ಮಿನಲ್ ನಿರ್ಮಾಣವಾದರೆ, ವಿದೇಶಿ ಪ್ರವಾಸಿ ಹಡಗುಗಳು ನೇರವಾಗಿ ಕರ್ನಾಟಕಕ್ಕೆ ಬರಲು ಅನುಕೂಲವಾಗುತ್ತದೆ. ಇದು ರಾಜ್ಯದ ಪ್ರವಾಸೋದ್ಯಮ ಇತಿಹಾಸದಲ್ಲೇ ಅತ್ಯಂತ ದೊಡ್ಡ ತಿರುವು ನೀಡುವ ಯೋಜನೆಯಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.

 


Share this with Friends

Related Post