Sat. Aug 1st, 2026

ಕಾಲೇಜು ವಿದ್ಯಾರ್ಥಿಗಳಲ್ಲಿ 7 ಸಾವಿರ ಹೆಚ್‌ಐವಿ ಸೋಂಕು ವದಂತಿ ಸುಳ್ಳು: ಆರೋಗ್ಯ ಇಲಾಖೆ ಸ್ಪಷ್ಟನೆ!

Share this with Friends

ಬೆಂಗಳೂರು: ಕರ್ನಾಟಕದ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್‌ಐವಿ (HIV) ಸೋಂಕು ಹರಡಿದೆ ಹಾಗೂ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ತಪಾಸಣೆ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಸ್ಪಷ್ಟನೆ ನೀಡಿದೆ.

ಈ ಕುರಿತು ಮಾಹಿತಿ ನೀಡಿದ ಇಲಾಖೆ, ಸಾರ್ವಜನಿಕರು ಇಂತಹ ಯಾವುದೇ ಅನಗತ್ಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದೆ.

ರಾಜ್ಯದ ಕಾಲೇಜು ವಿದ್ಯಾರ್ಥಿಗಳಲ್ಲಿ ಸುಮಾರು 7,000 ಜನರಿಗೆ ಹೆಚ್‌ಐವಿ ಸೋಂಕು ತಗುಲಿದೆ ಎಂಬ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ಯಾವುದೇ ನಿಯಮವನ್ನು ಸರ್ಕಾರ ಜಾರಿಗೆ ತಂದಿಲ್ಲ. ಬದಲಿಗೆ, ವಿದ್ಯಾರ್ಥಿಗಳಲ್ಲಿ ಸೋಂಕಿನ ಬಗ್ಗೆ ಜಾಗೃತಿ ಮತ್ತು ಮುನ್ನೆಚ್ಚರಿಕೆ ಮೂಡಿಸುವ ಅರಿವು ಕಾರ್ಯಕ್ರಮಗಳನ್ನು ಮಾತ್ರ ನಿಯಮಿತವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ಇಬ್ಬರಿಗೆ ಮಾತ್ರ ಸದ್ಯ ಪರೀಕ್ಷೆ ಕಡ್ಡಾಯ!

ರಾಜ್ಯದಲ್ಲಿ ಸಾಮಾನ್ಯ ನಾಗರಿಕರಿಗೆ ಅಥವಾ ವಿದ್ಯಾರ್ಥಿಗಳಿಗೆ ಹೆಚ್‌ಐವಿ ತಪಾಸಣೆಯನ್ನು ಕಡ್ಡಾಯ ಮಾಡಲಾಗಿಲ್ಲ. ಪ್ರಸ್ತುತ ಕೇವಲ ಎರಡು ಪ್ರಮುಖ ಸಂದರ್ಭಗಳಲ್ಲಿ ಮಾತ್ರ ವೈದ್ಯಕೀಯವಾಗಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ:

ಗರ್ಭಿಣಿ ಮಹಿಳೆಯರ ಹೆರಿಗೆಯ ಸಮಯದಲ್ಲಿ.

ಸಾರ್ವಜನಿಕರು ರಕ್ತದಾನ ಮಾಡುವ ಸಂದರ್ಭದಲ್ಲಿ.

ಕಳೆದ ಮೂರು ತಿಂಗಳಲ್ಲಿ ಒಟ್ಟು 5,53,453 ಜನರನ್ನು ಹೆಚ್‌ಐವಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 3,091 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 2,81,742 ಗರ್ಭಿಣಿಯರನ್ನು ತಪಾಸಣೆ ನಡೆಸಲಾಗಿದ್ದು, ಕೇವಲ 111 ಮಹಿಳೆಯರಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ. 2004 ರಿಂದ ಇಲ್ಲಿಯವರೆಗೆ ಒಟ್ಟು 39,028 ಸೋಂಕಿತರು ಚಿಕಿತ್ಸೆಗಾಗಿ ಇಲಾಖೆಯಲ್ಲಿ ನೋಂದಾಯಿಸಿಕೊಂಡಿದ್ದು, ಅವರಲ್ಲಿ 18 ರಿಂದ 35 ವರ್ಷದೊಳಗಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಚಿಕಿತ್ಸೆಯಿಂದ ಹೊರಗುಳಿದವರ ಪತ್ತೆಗೆ ಜಾಲ!

ರಾಜ್ಯದಲ್ಲಿ ಸದ್ಯ ಸುಮಾರು 56,000 ಹೆಚ್‌ಐವಿ ಸೋಂಕಿತರು ನಿರಂತರ ವೈದ್ಯಕೀಯ ತಪಾಸಣೆ ಹಾಗೂ ಎಆರ್‌ಟಿ (ART) ಚಿಕಿತ್ಸಾ ವ್ಯಾಪ್ತಿಯಿಂದ ಹೊರಗುಳಿದಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಇವರೆಲ್ಲರನ್ನೂ ಶೀಘ್ರದಲ್ಲೇ ಪತ್ತೆಹಚ್ಚಿ, ಮರಳಿ ಚಿಕಿತ್ಸಾ ವ್ಯಾಪ್ತಿಗೆ ತರಲು ಆರೋಗ್ಯ ಇಲಾಖೆ ವಿಶೇಷ ಹಂತದ ಪ್ರಯತ್ನಗಳನ್ನು ಆರಂಭಿಸಿದೆ. ಸದ್ಯ ರಾಜ್ಯದಲ್ಲಿ ಹೆಚ್‌ಐವಿ ಸೋಂಕಿನ ಪ್ರಮಾಣ ಸಂಪೂರ್ಣವಾಗಿ ನಿಯಂತ್ರಣದಲ್ಲಿದ್ದು, ಸುಳ್ಳು ಸುದ್ದಿಗಳನ್ನು ನಂಬಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

 

 


Share this with Friends

Related Post