ಮೈಸೂರು: “ಸಾಂಸ್ಕೃತಿಕ ನಗರಿ ಮೈಸೂರು ದೇಶದ ಅತ್ಯಂತ ಪ್ರಮುಖ ಸಾಂಸ್ಕೃತಿಕ ಮತ್ತು ಜ್ಞಾನದ ಕೇಂದ್ರವಾಗಿದೆ. ಜಾಗತಿಕ ಮಟ್ಟದಲ್ಲಿ ಸ್ವಾಮಿ ವಿವೇಕಾನಂದರು ಇತಿಹಾಸ ಸೃಷ್ಟಿಸುವ ಮುನ್ನ ಅವರಿಗೆ ಮೈಸೂರು ಮಹಾರಾಜರು ನೀಡಿದ ಬೆಂಬಲ ಅನನ್ಯವಾದುದು” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಮೈಸೂರಿನಲ್ಲಿ ಶ್ರೀ ರಾಮಕೃಷ್ಣ ಮಠದ ವತಿಯಿಂದ ನಿರ್ಮಿಸಲಾಗಿರುವ ಭವ್ಯ “ವಿವೇಕ ಸ್ಮಾರಕ”ವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಅವರು ಸಾಧಕರು ಮತ್ತು ಯುವಜನತೆಯನ್ನುದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರಧಾನಿಯವರು 7 ಸಂಪುಟಗಳ ‘ರಾಮಾಯಣ’ ಹಾಗೂ ‘ಬದುಕು ಬೆಳಕು’ ಎಂಬ ಕೃತಿಗಳನ್ನು ಬಿಡುಗಡೆ ಮಾಡಿದರು.
ಭಾಷಣದ ಆರಂಭದಲ್ಲೇ “ಎಲ್ಲರಿಗೂ ನನ್ನ ನಮಸ್ಕಾರಗಳು” ಎಂದು ಕನ್ನಡದಲ್ಲೇ ಉದ್ಗರಿಸುವ ಮೂಲಕ ಪ್ರಧಾನಿ ನೆರೆದಿದ್ದವರ ಮನ ಗೆದ್ದರು.
ಕುವೆಂಪು ಮತ್ತು ರಾಮಕೃಷ್ಣ ಆಶ್ರಮದ ಒಡನಾಟ
ಮೈಸೂರಿನ ದಸರಾ ವೈಭವ, ಸಾಹಿತ್ಯ ಹಾಗೂ ಸಂಗೀತ ಪರಂಪರೆಯನ್ನು ಸ್ಮರಿಸಿದ ಪ್ರಧಾನಿ ಮೋದಿ, “ರಾಮಕೃಷ್ಣ ಆಶ್ರಮವು 100 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ಸಂಗತಿ. ರಾಷ್ಟ್ರಕವಿ ಕುವೆಂಪು ಅವರು ಮೈಸೂರಿನಲ್ಲಿದ್ದಾಗ ಇದೇ ಆಶ್ರಮದಲ್ಲಿ ತಂಗಿದ್ದರು. ಸಾಧನೆಯ ಹಾದಿಯಲ್ಲಿ ಸಾಗುವಾಗ ಪ್ರತಿಯೊಬ್ಬರಿಗೂ ತಪಸ್ಸು ಅತ್ಯಗತ್ಯ. ಈ ಆಶ್ರಮವು ಅಂತಹ ಪವಿತ್ರ ವಾತಾವರಣವನ್ನು ಸೃಷ್ಟಿಸಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಮೆರಿಕದಿಂದ ಮೈಸೂರು ರಾಜರಿಗೆ ಪತ್ರ ಬರೆದಿದ್ದ ವಿವೇಕಾನಂದರು!
“ಸ್ವಾಮಿ ವಿವೇಕಾನಂದರು ಮೈಸೂರಿಗೆ ಬಂದಾಗ ಅವರು ವಿಶ್ವಪ್ರಸಿದ್ಧರಾಗಿರಲಿಲ್ಲ. ಆದರೆ ಮೈಸೂರಿನ ಮಣ್ಣಿಗೆ ಅವರಲ್ಲಿದ್ದ ಜ್ಞಾನದ ಶಕ್ತಿ ಗೊತ್ತಿತ್ತು. ಅಮೆರಿಕದ ಚಿಕಾಗೋ ಸರ್ವಧರ್ಮ ಸಮ್ಮೇಳನ ಮುಗಿದ ಬಳಿಕವೂ ಸ್ವಾಮೀಜಿಯವರು ಮೈಸೂರಿನ ಮಹಾರಾಜರಿಗೆ ವಿಶೇಷ ಪತ್ರ ಬರೆದು ಪರೋಪಕಾರದ ಸಂದೇಶ ಸಾರಿದ್ದರು. ವಿವೇಕಾನಂದರ ಆಲೋಚನೆಗಳಿಗೆ ಮೈಸೂರು ಸಂಸ್ಥಾನ ನೀಡಿದ ಪ್ರೋತ್ಸಾಹ ಇತಿಹಾಸದಲ್ಲಿ ಅಮರವಾಗಿದೆ” ಎಂದು ಪ್ರಧಾನಿ ಬಣ್ಣಿಸಿದರು.
ಇಂದು ಜಗತ್ತಿನಾದ್ಯಂತ ಭಾರತದ ಯುವಜನತೆ ಅತ್ಯುನ್ನತ ಸ್ಥಾನಗಳನ್ನು ಪಡೆದು ದೇಶದ ಕೀರ್ತಿ ಹೆಚ್ಚಿಸುತ್ತಿದ್ದಾರೆ. ನೂತನವಾಗಿ ಉದ್ಘಾಟನೆಗೊಂಡಿರುವ ಈ ‘ವಿವೇಕ ಸ್ಮಾರಕ’ವು ಮುಂಬರುವ ದಿನಗಳಲ್ಲಿ ನವ ಭಾರತವನ್ನು ನಿರ್ಮಿಸುವ ಸಾಧಕರು, ಶ್ರದ್ಧಾಳುಗಳು ಮತ್ತು ಯುವ ಪೀಳಿಗೆಯ ಅತ್ಯಂತ ಪ್ರಮುಖ ಜ್ಞಾನ ಕೇಂದ್ರವಾಗಲಿ ಎಂದು ಪ್ರಧಾನಿ ಮೋದಿ ಆಶಿಸಿದರು.
“ತಂತ್ರಜ್ಞಾನ, ಸ್ಟಾರ್ಟಪ್ ಕ್ರಾಂತಿಗೆ ಭಾರತದ ಯುವಶಕ್ತಿಯೇ ಅಧಿಪತಿ!”
“ಇಂದು ಜಗತ್ತಿನಾದ್ಯಂತ ತಂತ್ರಜ್ಞಾನ, ಮೊಬೈಲ್ ಉತ್ಪಾದನೆ, ಡಿಜಿಟಲ್ ತಂತ್ರಜ್ಞಾನ ಹಾಗೂ ಸೆಮಿಕಂಡಕ್ಟರ್ ಕ್ಷೇತ್ರಗಳಲ್ಲಿ ಭಾರತ ಅತಿ ದೊಡ್ಡ ಸಾಧನೆ ಮಾಡುತ್ತಿದೆ. ಈ ಅಭೂತಪೂರ್ವ ಯಶಸ್ಸಿನ ಹಿಂದೆ ದೇಶದ ಹೆಮ್ಮೆಯ ಯುವಶಕ್ತಿಯ ಕೊಡುಗೆ ಇದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಣ್ಣಿಸಿದರು.
ನನ್ನ ಸಾಧನೆಗೆ ರಾಮಕೃಷ್ಣ ಮಿಷನ್ ಕಾರಣ!
ತಮ್ಮ ವೈಯಕ್ತಿಕ ಜೀವನವನ್ನು ಸ್ಮರಿಸಿದ ಪ್ರಧಾನಿ ಮೋದಿ, “ನನ್ನ ಇಂದಿನ ಸಾಧನೆ ಮತ್ತು ಜೀವನದ ಮೌಲ್ಯಗಳ ಹಿಂದೆ ಶ್ರೀ ರಾಮಕೃಷ್ಣ ಮಿಷನ್ ನೀಡಿದ ಸಂಸ್ಕಾರ ಮತ್ತು ಕೊಡುಗೆ ಅತ್ಯಂತ ದೊಡ್ಡದಾಗಿದೆ. ಯುವಜನತೆಗೆ ಸರಿಯಾದ ಮಾರ್ಗ ತೋರಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ. ಅದಕ್ಕಾಗಿಯೇ ನಮ್ಮ ಸರ್ಕಾರ ದೇಶದ ಶೈಕ್ಷಣಿಕ ಮೂಲಸೌಕರ್ಯವನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸುತ್ತಿದೆ. ಯುವಕರಲ್ಲಿ ಹೊಸ ಆಲೋಚನೆಗಳನ್ನು ಬಿತ್ತಲು ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ದೇಶಾದ್ಯಂತ ಆರಂಭಿಸಲಾಗಿದೆ” ಎಂದು ವಿವರಿಸಿದರು.
ಮಾತೃಭಾಷೆಯಲ್ಲೇ ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣ!
“ಭಾಷೆ ಎಂಬುದು ಜ್ಞಾನಕ್ಕೆ ಅಡ್ಡಿಯಾಗಬಾರದು. ಇದೇ ಕಾರಣಕ್ಕೆ ಇಂದು ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲೇ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಶಿಕ್ಷಣವನ್ನು ಕಲಿಯುವ ಐತಿಹಾಸಿಕ ವ್ಯವಸ್ಥೆಯನ್ನು ತರಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಯುವ ಪ್ರತಿಭೆಗಳನ್ನು ಗುರುತಿಸಲು ‘ಖೇಲೋ ಇಂಡಿಯಾ’ ಮೂಲಕ ದೊಡ್ಡ ವೇದಿಕೆ ನೀಡಲಾಗಿದೆ. ಕರ್ನಾಟಕದ ಪುಣ್ಯಭೂಮಿ ಕನ್ನಡ ಭಾಷೆಗೆ ಜಾಗತಿಕ ಮಟ್ಟದ ಮಹಾನ್ ಸಾಹಿತಿ ಮತ್ತು ಲೇಖಕರನ್ನು ಕೊಡುಗೆಯಾಗಿ ನೀಡಿದೆ” ಎಂದು ಪ್ರಧಾನಿ ಶ್ಲಾಘಿಸಿದರು.
ವೇದಿಕೆಯಲ್ಲಿ ಪ್ರಧಾನಿಯವರು ವಿದ್ಯಾರ್ಥಿಗಳತ್ತ ಕೈಬೀಸಿದಾಗ ಇಡೀ ಸಭಾಂಗಣದಲ್ಲಿ ‘ಮೋದಿ, ಮೋದಿ’ ಎಂಬ ಜಯಘೋಷ ಮೊಳಗಿತು.

