ಬೆಂಗಳೂರು:ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆಯ ಓಎಂಆರ್ ಶೀಟ್ ಗೊಂದಲವನ್ನು ಮುಂದಿಟ್ಟುಕೊಂಡು, ತಮ್ಮ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಅಥವಾ ತಾಂತ್ರಿಕ ಲೋಪ ಸಂಭವಿಸಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, ವಿರೋಧ ಪಕ್ಷಗಳ ರಾಜೀನಾಮೆ ಬೇಡಿಕೆಗೆ ಕೌಂಟರ್ ನೀಡಿದರು. “ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪಿಎಸ್‌ಐ (PSI) ನೇಮಕಾತಿ ಹಗರಣದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದು ಒಎಂಆರ್ ಶೀಟ್‌ಗಳನ್ನೇ ತಿದ್ದಲಾಗಿತ್ತು. ಅಂತಹ ದೊಡ್ಡ ಹಗರಣ ನಡೆದಾಗ ಅಂದಿನ ಗೃಹ ಸಚಿವರು ರಾಜೀನಾಮೆ ನೀಡಿದ್ದರೇ?” ಎಂದು ಪ್ರಶ್ನಿಸುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದರು.
“ರಾಜ್ಯಾದ್ಯಂತ ಲಕ್ಷಾಂತರ ನಿರುದ್ಯೋಗಿ ಯುವಕರು ಯಾವುದೇ ಗೊಂದಲವಿಲ್ಲದೆ ಪರೀಕ್ಷೆ ಬರೆದಿದ್ದಾರೆ. ಕೇವಲ ಒಂದೆರಡು ಕೇಂದ್ರಗಳಲ್ಲಿ ಸುಮಾರು 120 ರಷ್ಟು ಅಭ್ಯರ್ಥಿಗಳಿಗೆ ಮಾತ್ರ ನಿಯಮಗಳ ಸರಿಯಾದ ಮಾಹಿತಿ ಇಲ್ಲದ ಕಾರಣ ಗೊಂದಲ ಉಂಟಾಗಿತ್ತು. ಕೇವಲ ವರ್ಷನ್ ಕೋಡ್ ಮತ್ತು ರಿಜಿಸ್ಟರ್ ನಂಬರ್ ಸರಿಯಾಗಿ ನಮೂದಿಸಿದರೆ ಸಾಕಿತ್ತು. ಪ್ರಶ್ನೆ ಪತ್ರಿಕೆ ಮತ್ತು ಓಎಂಆರ್ ಶೀಟ್‌ಗಳ ಸೀರಿಯಲ್ ನಂಬರ್ ಒಂದೇ ಇರಬೇಕು ಎಂಬ ಯಾವುದೇ ನಿಯಮ ಇರಲಿಲ್ಲ” ಎಂದು ವಿವರಿಸಿದರು
ಪಾರದರ್ಶಕವಾಗಿ ನಡೆದ ಪರೀಕ್ಷೆಯನ್ನು ರಾಜಕೀಯ ಲಾಭಕ್ಕಾಗಿ ವಿವಾದ ಮಾಡಲು ಯತ್ನಿಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ ಖರ್ಗೆ,ಪರೀಕ್ಷೆಯು ಅತ್ಯಂತ ಪಾರದರ್ಶಕವಾಗಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳನ್ನು ಅಭ್ಯರ್ಥಿಗಳು ನಂಬಬಾರದು ಎಂದು ವಿನಂತಿಸಿದರು.
ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ:
ಪರೀಕ್ಷಾ ಕೊಠಡಿಯೊಳಗೆ ಮೇಲ್ವಿಚಾರಕರು ತಿಳಿಹೇಳಿದರೂ ಕೇಳದೆ, ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ ಶೀಟ್ ಹಿಡಿದು ಹೊರನಡೆದ ಅಭ್ಯರ್ಥಿಗಳು ಪರೀಕ್ಷಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇಂತಹ ಅಭ್ಯರ್ಥಿಗಳನ್ನು ಮತ್ತೆ ಪರೀಕ್ಷೆ ಬರೆಯಲು ಕೊಠಡಿಯೊಳಗೆ ಸೇರಿಸಲು ನಿಯಮಗಳಲ್ಲಿ ಅವಕಾಶವಿಲ್ಲ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

