Mon. Aug 3rd, 2026

ಹೈಕಮಾಂಡ್ ಪಟ್ಟಿಯಲ್ಲಿ ಅದಲು-ಬದಲು; ಮಂಕಾಳು ವೈದ್ಯಗೆ ಕೊಕ್, ಎಸ್.ಎಸ್. ಮಲ್ಲಿಕಾರ್ಜುನ್ ಇನ್

Share this with Friends

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಅಧಿಕೃತ ಪ್ರಕಟಣೆಯ ಬೆನ್ನಲ್ಲೇ ತೀವ್ರ ಕುತೂಹಲಕಾರಿ ಬೆಳವಣಿಗೆಯೊಂದು ನಡೆದಿದೆ. ಮೊದಲು ಹೊರಬಿದ್ದಿದ್ದ ಸಚಿವರ ಪಟ್ಟಿಯಲ್ಲಿ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳು ವೈದ್ಯ ಅವರ ಹೆಸರು ಇದ್ದ ಹೊರತಾಗಿಯೂ, ಕೊನೆಯ ಕ್ಷಣದಲ್ಲಿ ಅವರಿಗೆ ಮಂತ್ರಿ ಸ್ಥಾನ ಕೈತಪ್ಪಿದೆ.

ತಾಂತ್ರಿಕ ದೋಷದ ಸಮರ್ಥನೆ:

ಈ ಹಠಾತ್ ಬದಲಾವಣೆಗೆ ಸಂಬಂಧಿಸಿದಂತೆ ಪಕ್ಷದ ಹೈಕಮಾಂಡ್ ಸ್ಪಷ್ಟನೆ ನೀಡಿದ್ದು, ಬಿಡುಗಡೆಯಾಗಿದ್ದ ಪಟ್ಟಿಯಲ್ಲಿ ಶಾಸಕರ ಹೆಸರು ಸೇರ್ಪಡೆಯಾಗಿರುವುದು ಕೇವಲ ಟೈಪಿಂಗ್ ದೋಷ (Typing Mistake) ಎಂದು ಸಮರ್ಥಿಸಿಕೊಂಡಿದೆ. ಸದ್ಯ ಅವರ ಜಾಗಕ್ಕೆ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಸಚಿವ ಸ್ಥಾನವನ್ನು ಖಚಿತಪಡಿಸಿ ಆದೇಶ ಹೊರಡಿಸಲಾಗಿದೆ.

ಕೊನೆ ಕ್ಷಣದ ರಾಜಕೀಯ ಒತ್ತಡ?:

ಪಕ್ಷದ ಮೂಲಗಳ ಪ್ರಕಾರ, ಮಂತ್ರಿ ಸ್ಥಾನ ಸಿಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಸ್.ಎಸ್. ಮಲ್ಲಿಕಾರ್ಜುನ ಅವರು ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಅವರೊಂದಿಗೆ ಜನಪ್ರತಿನಿಧಿಗಳಾಗಿರುವ ಅವರ ಕುಟುಂಬಸ್ಥರು ಕೂಡ ಹುದ್ದೆಗಳನ್ನು ತೊರೆಯಲಿದ್ದಾರೆ ಎಂದು ನಾಯಕರ ಮೇಲೆ ತೀವ್ರ ಒತ್ತಡ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿಯೇ ಮಂಕಾಳು ವೈದ್ಯ ಅವರಿಗೆ ಕೊಕ್ ನೀಡಿ, ಮಲ್ಲಿಕಾರ್ಜುನ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಇತ್ತ ಸಚಿವ ಸ್ಥಾನ ಕೈತಪ್ಪಿದ್ದರಿಂದ ತೀವ್ರ ಬೇಸರಗೊಂಡಿರುವ ಮಂಕಾಳು ವೈದ್ಯ ಅವರು ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿದ್ದರಾದರೂ, ಭೇಟಿ ಸಾಧ್ಯವಾಗದೆ ಅಸಮಾಧಾನದಿಂದಲೇ ವಾಪಸಾಗಿದ್ದಾರೆ.

 

 


Share this with Friends

Related Post