ಬೆಂಗಳೂರು:ನಗರದ ಗಿಜಿಗುಡುವ ರಸ್ತೆಗಳ ಬದಿಯಲ್ಲಿ, ಕಲ್ಲು-ಮುಳ್ಳುಗಳ ನಡುವೆ ಆಹಾರಕ್ಕಾಗಿ ಅಲೆಯುವ ನೂರಾರು ಅನಾಥ ಶ್ವಾನಗಳ ನೋವಿನ ಕಥೆ ನಮಗೆಲ್ಲ ಗೊತ್ತು. ಅಂತಹ ಅಸಹಾಯಕ ಮೂಕಜೀವಿಗಳಿಗೆ ಆಸರೆಯಾಗಿದ್ದ ಬೆಂಗಳೂರಿನ ಮೇಡಿ ಅಗ್ರಹಾರದ ನಾಯಿ ಆಶ್ರಯ ತಾಣಕ್ಕೀಗ (Dog Shelter) ಹೊಸದೊಂದು ಸ್ಪರ್ಶ ಸಿಕ್ಕಿದೆ. ಈ ಕೇಂದ್ರದ ದಿನನಿತ್ಯದ ನಿರ್ವಹಣೆ ಹಾಗೂ ಶ್ವಾನಗಳ ಕಲ್ಯಾಣದ ಸಂಪೂರ್ಣ ಜವಾಬ್ದಾರಿಯನ್ನು ಬೆಂಗಳೂರು ಉತ್ತರ ಮಹಾನಗರ ಪಾಲಿಕೆಯು ಅಧಿಕೃತವಾಗಿ ‘ಭೂತ್‌ಪೂರ್ವ’ ಸ್ವಯಂಸೇವಾ ಸಂಸ್ಥೆಗೆ ಒಪ್ಪಿಸಿದೆ.
ಬರಿ ಗೂಡಲ್ಲ, ಇದು ಪ್ರೀತಿಯ ಅರಮನೆ:
ಇದುವರೆಗೆ ಕೇವಲ ನಾಲ್ಕು ಗೋಡೆಗಳ ನಡುವೆ ಇದ್ದ ಆಶ್ರಯ ತಾಣವು, ಇನ್ಮುಂದೆ ಈ ಎನ್‌ಜಿಒ ಸಂಸ್ಥೆಯ ಸಹಭಾಗಿತ್ವದಲ್ಲಿ ವೃತ್ತಿಪರ ಮತ್ತು ಕರುಣೆಯ ನಿಲ್ದಾಣವಾಗಿ ಬದಲಾಗಲಿದೆ. ಇಲ್ಲಿರುವ ಪ್ರತಿಯೊಂದು ಜೀವಿಗೆ ಸಮಯಕ್ಕೆ ಸರಿಯಾದ ಪೌಷ್ಟಿಕ ಆಹಾರ, ರೋಗಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ನಿಯಮಿತ ಆರೋಗ್ಯ ತಪಾಸಣೆಯ ಸೌಲಭ್ಯ ಸಿಗಲಿದೆ. ವಿಶೇಷವಾಗಿ ಗಾಯಗೊಂಡ ಮತ್ತು ತೀವ್ರ ಕಾಯಿಲೆಯಿಂದ ಬಳಲುತ್ತಿರುವ ನಾಯಿಗಳ ಶುಶ್ರೂಷೆಗಾಗಿ ಪ್ರತ್ಯೇಕ ವಾರ್ಡ್‌ಗಳನ್ನು ನಿರ್ಮಿಸಿ, ಅವುಗಳು ಬೇಗನೆ ಚೇತರಿಸಿಕೊಳ್ಳಲು ವೃತ್ತಿಪರ ಸಿಬ್ಬಂದಿ ಶ್ರಮಿಸಲಿದ್ದಾರೆ.
ಜವಾಬ್ದಾರಿಯುತ ನಗರಾಡಳಿತಕ್ಕೆ ಹೊಸ ಮಾದರಿ:
ಬೆಂಗಳೂರನ್ನು ಪ್ರಾಣಿ ಸ್ನೇಹಿ ಮತ್ತು ಕರುಣೆಯ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪಾಲಿಕೆ ಇಟ್ಟಿರುವ ಈ ಹೆಜ್ಜೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಕೇವಲ ಬೀದಿನಾಯಿಗಳ ಸಂಖ್ಯೆಯನ್ನು ನಿಯಂತ್ರಿಸುವುದಷ್ಟೇ ಅಲ್ಲದೆ, ಆಶ್ರಯದಲ್ಲಿರುವ ಮೂಕಜೀವಿಗಳಿಗೂ ಗೌರವಯುತ ಬದುಕು ಕಲ್ಪಿಸುವುದು ನಮ್ಮ ಕರ್ತವ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಒಪ್ಪಂದದ ಮೂಲಕ ಮೇಡಿ ಅಗ್ರಹಾರದ ಶ್ವಾನ ಧಾಮದಲ್ಲಿ ಇನ್ಮುಂದೆ ಪ್ರೀತಿ, ಕಾಳಜಿ ಮತ್ತು ಸುರಕ್ಷತೆಯ ಹೊಸ ಅಧ್ಯಾಯ ಆರಂಭವಾಗಲಿದೆ.

