ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಅಧಿಕೃತ ಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಮತ್ತು ಬಂಡಾಯದ ಧ್ವನಿಗಳು ತೀವ್ರಗೊಂಡಿವೆ. ಮಂತ್ರಿಗಿರಿ ಸಿಗದ ಕಾರಣ ಹಿರಿಯ ಶಾಸಕರು ರಾಜೀನಾಮೆ ನೀಡಲು ಮುಂದಾಗಿರುವುದು ಮತ್ತು ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮಾಧಾನದಿಂದಿರುವಂತೆ ಸಲಹೆ ನೀಡಿದ್ದಾರೆ, ಶಾಸಕರಿಗೆ ಧೃತಿಗೆಡದಂತೆ ಮನವಿ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, “ಸಂಪುಟದಲ್ಲಿ ಕೇವಲ ಸೀಮಿತ ಸ್ಥಾನಗಳು ಮಾತ್ರ ಇರುತ್ತವೆ. ಸಂವಿಧಾನಬದ್ಧವಾಗಿ ಎಲ್ಲರಿಗೂ ಒಂದೇ ಬಾರಿಗೆ ಸಚಿವ ಸ್ಥಾನ ನೀಡಲು ಯಾವುದೇ ಸರ್ಕಾರದಲ್ಲೂ ಸಾಧ್ಯವಿಲ್ಲ. ಪಕ್ಷಕ್ಕಾಗಿ ಮತ್ತು ಸರ್ಕಾರದ ರಚನೆಗಾಗಿ ಶ್ರಮಿಸಿದ ಪ್ರತಿಯೊಬ್ಬ ಶಾಸಕರ ಶ್ರಮ ಹಾಗೂ ಯೋಗ್ಯತೆಯ ಬಗ್ಗೆ ನನಗೆ ಸಂಪೂರ್ಣ ಗೌರವವಿದೆ. ಆದರೆ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಮತ್ತು ಹೈಕಮಾಂಡ್ ನಿರ್ಧಾರಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕಾಗುತ್ತದೆ. ಹೀಗಾಗಿ ಎಲ್ಲಾ ಶಾಸಕರು ಸ್ವಲ್ಪ ತಾಳ್ಮೆಯಿಂದ ಇರಬೇಕು” ಎಂದು ಹಿರಿಯಣ್ಣನ ಶೈಲಿಯಲ್ಲಿ ಸಲಹೆ ನೀಡಿದರು.
ಬಂಡಾಯ ಶಾಸಕರ ಮನವೊಲಿಕೆಗೆ ಸೂಚನೆ:
ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಿಸಿರುವ ಹಿರಿಯ ನಾಯಕರಾದ ಯಶವಂತರಾಯಗೌಡ ಪಾಟೀಲ್,ಬಿಕೆ ಸಂಗಮೇಶ್ ಹಾಗೂ ಬೇಳೂರು ಗೋಪಾಲಕೃಷ್ಣ ಅವರ ನಿರ್ಧಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಯಾರೂ ಕೂಡ ಆತುರದ ನಿರ್ಧಾರಗಳನ್ನು ಕೈಗೊಳ್ಳಬಾರದು. ಪಕ್ಷದಲ್ಲಿ ಶಿಸ್ತು ಅತ್ಯಂತ ಮುಖ್ಯ. ಮುಂದಿನ ದಿನಗಳಲ್ಲಿ ನಿಗಮ ಮಂಡಳಿಗಳು ಸೇರಿದಂತೆ ಹಲವು ಪ್ರಮುಖ ಸಾಂವಿಧಾನಿಕ ಹುದ್ದೆಗಳಲ್ಲಿ ಅರ್ಹರಿಗೆ ಸೂಕ್ತ ಜವಾಬ್ದಾರಿಗಳನ್ನು ನೀಡಲಾಗುವುದು ಎಂದರು.
ಬಂಡಾಯ ಎದ್ದಿರುವ ನಾಯಕರೊಂದಿಗೆ ಪಕ್ಷದ ಹಿರಿಯ ನಾಯಕರು ಶೀಘ್ರದಲ್ಲೇ ಮಾತುಕತೆ ನಡೆಸಿ ಅವರ ಮನವೊಲಿಸಲಿದ್ದಾರೆ” ಎಂದು ಭರವಸೆ ನೀಡಿದ್ದಾರೆ. ಈ ಮೂಲಕ ಸಂಪುಟ ವಿಸ್ತರಣೆಯಿಂದ ಸೃಷ್ಟಿಯಾಗಿರುವ ಭಿನ್ನಮತದ ಬೇಗುದಿಯನ್ನು ತಣ್ಣಗಾಗಿಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ.

