ಬೆಂಗಳೂರು: ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಪ್ರತಿಷ್ಠಿತ ‘ಪಿಆರ್ಸಿಐ ನೆಕ್ಸ್ಟ್ಜೆನ್ ಗವರ್ನೆನ್ಸ್ ಪ್ರಶಸ್ತಿ 2026’ (PRCI NextGEN Governance Awards) ಪ್ರದಾನ ಸಮಾರಂಭದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಸಾರ್ವಜನಿಕ ಸೇವಾ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ಕಾಲಮಿತಿಯ ದೂರು ಪರಿಹಾರ ವ್ಯವಸ್ಥೆಯನ್ನು ಜಾರಿಗೆ ತಂದಿರುವುದಕ್ಕಾಗಿ ಬಿಡಿಎ ಈ ಮನ್ನಣೆ ಪಡೆದಿದೆ.
ನಾಗರಿಕ ಸೇವೆಗೆ ಶ್ರೇಷ್ಠತಾ ಪ್ರಶಸ್ತಿ:
ಸಾರ್ವಜನಿಕರ ದೂರುಗಳನ್ನು ತ್ವರಿತವಾಗಿ ಆಲಿಸಿ ಪರಿಹರಿಸುವ ಸಲುವಾಗಿ ಜಾರಿಗೆ ತರಲಾಗಿರುವ ‘ಬಿಡಿಎ ಗ್ಯಾರಂಟಿ – ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ’ (PGRS) ಉಪಕ್ರಮಕ್ಕೆ ‘ನಾಗರಿಕ ಕೇಂದ್ರಿತ ನಗರಾಡಳಿತ ಶ್ರೇಷ್ಠತಾ’ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡಿಎ ಆಯುಕ್ತರಾದ ಮೇಜರ್ ಮಣಿವಣ್ಣನ್ ಪಿ. (IAS) ಅವರು ಪ್ರಾಧಿಕಾರದ ಅಧಿಕಾರಿಗಳ ತಂಡದೊಂದಿಗೆ ಈ ಸಾಂಸ್ಥಿಕ ಪ್ರಶಸ್ತಿಯನ್ನು ಸ್ವೀಕರಿಸಿದರು. ಬಿಡಿಎ ಅಧ್ಯಕ್ಷರಾದ ಎನ್.ಎ. ಹ್ಯಾರಿಸ್ ಅವರ ನೇತೃತ್ವದಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.
ಬಿಡಿಎ ಸಾರಥಿಗಳಿಗೆ ಒಲಿದ ವೈಯಕ್ತಿಕ ಗೌರವ:
ಇದೇ ಸಮಾರಂಭದಲ್ಲಿ ಪ್ರಾಧಿಕಾರದ ಸಾಂಸ್ಥಿಕ ಸಾಧನೆಗೆ ಕಾರಣರಾದ ಇಬ್ಬರು ಪ್ರಮುಖ ನಾಯಕರಿಗೂ ವೈಯಕ್ತಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಿಡಿಎ ಅಧ್ಯಕ್ಷರಾದ ಎನ್.ಎ. ಹ್ಯಾರಿಸ್ ಅವರಿಗೆ ‘ದೂರದರ್ಶಿ ನಾಯಕತ್ವ’ (Visionary Leadership) ಪ್ರಶಸ್ತಿ ಪ್ರದಾನ ಮಾಡಲಾಯಿತು. ಅದರೊಂದಿಗೆ, ಆಡಳಿತದಲ್ಲಿ ತಂತ್ರಜ್ಞಾನಾಧಾರಿತ ಮತ್ತು ಜನಸ್ನೇಹಿ ಸುಧಾರಣೆಗಳನ್ನು ತಂದ ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್ ಪಿ. ಅವರಿಗೆ ‘ಪರಿವರ್ತನಾತ್ಮಕ ಸಾರ್ವಜನಿಕ ಸೇವೆ’ (Transformational Public Service) ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಂತ್ರಜ್ಞಾನದ ಬಳಕೆಯ ಮೂಲಕ ಬಿಡಿಎ ಆಡಳಿತ ವ್ಯವಸ್ಥೆಯನ್ನು ಬಲಪಡಿಸಿರುವುದಕ್ಕೆ ಈ ಪ್ರಶಸ್ತಿಗಳು ಸಾಕ್ಷಿಯಾಗಿವೆ ಎಂದು ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

