ಉಡುಪಿ:ಕೋಲಾಹಲದ ನಗರ ಜೀವನ, ಸದಾ ಜಿಟಿಜಿಟಿ ಎನ್ನುವ ಟ್ರಾಫಿಕ್ ಮತ್ತು ದೈನಂದಿನ ಒತ್ತಡದಿಂದ ಮುಕ್ತಿ ಪಡೆದು ಪ್ರಕೃತಿಯ ಮಡಿಲಲ್ಲಿ ಕಳೆಯಬೇಕು ಎನ್ನುವವರಿಗೆ ಪಶ್ಚಿಮ ಘಟ್ಟಗಳ ಸಾಲು ಯಾವಾಗಲೂ ಮೊದಲ ಆಯ್ಕೆ. ಅದರಲ್ಲೂ ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪದ ಮೂದೂರು ಗ್ರಾಮದ ದಟ್ಟ ಹಸಿರು ಅರಣ್ಯದ ನಡುವೆ ಅಡಗಿರುವ ‘ಬೆಳ್ಕಲ್ ತೀರ್ಥ ಜಲಪಾತ’ ಪ್ರಕೃತಿ ಪ್ರೇಮಿಗಳನ್ನು ಮತ್ತು ಸಾಹಸಿಗರನ್ನು ತನ್ನತ್ತ ಸೆಳೆಯುವ ಒಂದು ಅಪರೂಪದ ತಾಣ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಟ್ಟದ ಸಾಲಿನಿಂದ ಹಾಲ್ನೊರೆಯಂತೆ ದುಮ್ಮಿಕ್ಕುತ್ತಾ ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ.
ಕೊಡಚಾದ್ರಿ ಬೆಟ್ಟಸಾಲುಗಳ ಮುಂದುವರಿದ ಭಾಗವಾದ ಕೊರ್ಶಿ ಬೆಟ್ಟದಿಂದ ಸುಮಾರು 300 ರಿಂದ 400 ಅಡಿಗಳಷ್ಟು ಎತ್ತರದಿಂದ ಭೋರ್ಗರೆದು ಕೆಳಗೆ ಬೀಳುವ ಈ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಹಸಿರು ಹಾಸಿನ ನಡುವೆ ಬೆಳ್ಳಿಯ ಸೀರೆಯಂತೆ ಕಂಗೊಳಿಸುವ ಈ ಜಲಪಾತದ ನೀರು ಅತ್ಯಂತ ಶುದ್ಧ ಮತ್ತು ಪವಿತ್ರ ಎಂದು ನಂಬಲಾಗಿದೆ. ಇಲ್ಲಿನ ನೀರಿಗೆ ವಿಶೇಷ ಆಯುರ್ವೇದ ಗುಣಗಳಿವೆ ಎಂಬ ಪ್ರತೀತಿ ಇರುವುದರಿಂದ, ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಹಾಗೂ ಭಕ್ತರು ಇಲ್ಲಿಗೆ ಬಂದು ಪವಿತ್ರ ಸ್ನಾನ ಮಾಡುತ್ತಾರೆ. ಈ ಜಲಪಾತ ಇದೀಗೆ ಮೈದುಂಬಿದೆ.
ಚಾರಣಿಗರ ಪಾಲಿನ ರೋಮಾಂಚನಕಾರಿ ಹಾದಿ:
ಬೆಳ್ಕಲ್ ತೀರ್ಥವನ್ನು ತಲುಪುವುದು ಕೇವಲ ಪ್ರವಾಸವಲ್ಲ, ಅದೊಂದು ಸಾಹಸಯಾತ್ರೆ. ಮೂಕಂಬಿಕಾ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಗೆ ಬರುವ ಈ ಜಲಪಾತವನ್ನು ತಲುಪಲು ಯಾವುದೇ ವಾಹನ ಸೌಕರ್ಯಗಳಿಲ್ಲ. ಬೆಳ್ಕಲ್ ಗ್ರಾಮದ ಬೇಸ್ ಪಾಯಿಂಟ್‌ನಿಂದ ದಟ್ಟವಾದ ಕಾಡು, ಕಡಿದಾದ ಕಲ್ಲು-ಬಂಡೆಗಳು ಮತ್ತು ಕಾಡಿನ ತೊರೆಗಳನ್ನು ದಾಟುತ್ತಾ ಸುಮಾರು 3 ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲೇ ಸಾಗಬೇಕು. ಮಳೆಗಾಲದಲ್ಲಿ ಕಾಲಿಟ್ಟರೆ ಸಾಕು ಜಿಗಣೆಗಳ (Leeches) ಕಾಟ ಹೆಚ್ಚಿರುತ್ತದೆಯಾದರೂ, ಕಣ್ಣೆದುರು ಅನಾವರಣಗೊಳ್ಳುವ ಪ್ರಕೃತಿಯ ಸೌಂದರ್ಯದ ಮುಂದೆ ಆ ಕಷ್ಟಗಳೆಲ್ಲ ಮರೆತುಹೋಗುತ್ತವೆ.
ಭೇಟಿಗೆ ಸೂಕ್ತ ಸಮಯ ಯಾವುದು?:
ಈ ಜಲಪಾತದ ನೈಜ ಸೌಂದರ್ಯವನ್ನು ಕಣ್ಣುಂಬಿಕೊಳ್ಳಲು ಮುಂಗಾರು ಮುಗಿದ ನಂತರದ ಸಮಯ ಅಂದರೆ, ಜುಲೈನಿಂದ ಜನವರಿ ತಿಂಗಳು ಅತ್ಯಂತ ಪ್ರಶಸ್ತ. ಮಳೆಗಾಲದ ದಿನಗಳಲ್ಲಿ ಜಲಪಾತವು ಪೂರ್ಣ ಪ್ರಮಾಣದಲ್ಲಿ ಹರಿಯುವುದರಿಂದ ನೋಟ ಅದ್ಭುತವಾಗಿರುತ್ತದೆ.ಆದರೆ ಫೆಬ್ರವರಿಯಿಂದ ಮೇ ತಿಂಗಳ ಬೇಸಿಗೆಯ ಅವಧಿಯಲ್ಲಿ ಇಲ್ಲಿ ನೀರು ಸಂಪೂರ್ಣವಾಗಿ ಒಣಗಿಹೋಗುವುದರಿಂದ ಪ್ರವಾಸಿಗರು ಭೇಟಿ ನೀಡುವುದು ಸೂಕ್ತವಲ್ಲ.
ಇದಿಗ ಜಲಪಾತ ಕಣ್ಮನ ಸೆಳೆಯುವಂತೆ ದುಮ್ಮಿಕ್ಕುತ್ತಾ ನೋಡಿಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.ದಟ್ಟ ಅರಣ್ಯ ಪ್ರದೇಶವಾಗಿರುವುದರಿಂದ ಚಾರಣಕ್ಕೆ ಹೋಗುವ ಮುನ್ನ ಅರಣ್ಯ ಇಲಾಖೆಯ ಮುನ್ನೆಚ್ಚರಿಕೆ ಹಾಗೂ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.

