ಶಿವಮೊಗ್ಗ: ಮಲೆನಾಡಿನ ಜೀವನಾಡಿ ಹಾಗೂ ಸಮೃದ್ಧಿಯ ಸಂಕೇತವಾಗಿರುವ ತುಂಗಾ ನದಿಗೆ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ (ಚೆನ್ನಿ) ಅವರು ಭಕ್ತಿಪೂರ್ವಕವಾಗಿ ಬಾಗಿನ ಅರ್ಪಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಶಿವಮೊಗ್ಗ ನಗರ ಘಟಕದ ವತಿಯಿಂದ ಕೋಟೆ ರಸ್ತೆಯ ಐತಿಹಾಸಿಕ ಶ್ರೀ ಕೋರ್ಪಳಯ್ಯನ ಛತ್ರದ ಆವರಣದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.ಮೈದುಂಬಿ ಹರಿಯುತ್ತಿರುವ ತಾಯಿ ತುಂಗೆಗೆ ಸಾಂಪ್ರದಾಯಿಕವಾಗಿ ಬಾಗಿನ ಸಮರ್ಪಿಸಿದ ಶಾಸಕರು, “ಶಿವಮೊಗ್ಗದ ಜೀವನಾಡಿಯಾಗಿ, ಇಡೀ ಜಿಲ್ಲೆಯ ಸಮೃದ್ಧಿಯ ಸಂಕೇತವಾಗಿ ಮೈದುಂಬಿ ಹರಿಯುತ್ತಿರುವ ಜೀವನದಾಯಿನಿ ತಾಯಿ ತುಂಗಾ ನದಿಗೆ ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸುವುದು ಕೇವಲ ಒಂದು ಆಚರಣೆಯಲ್ಲ. ಅದು ನಮ್ಮ ನಾಡಿನ ಪವಿತ್ರ ಪರಂಪರೆ ಹಾಗೂ ಪ್ರಕೃತಿಗೆ ನಾವು ಸಲ್ಲಿಸುವ ಕೃತಜ್ಞತೆಯ ಸಂಕೇತವಾಗಿದೆ”ಎಂದರು.
“ತಾಯಿ ತುಂಗೆಗೆ ಭಕ್ತಿಪೂರ್ವಕವಾಗಿ ಬಾಗಿನ ಸಮರ್ಪಣೆ ಮಾಡಿ, ನಮ್ಮ ಶಿವಮೊಗ್ಗ ನಗರ, ಜಿಲ್ಲೆ ಸೇರಿದಂತೆ ಇಡೀ ನಾಡಿನಲ್ಲಿ ಸದಾ ಸುಭಿಕ್ಷೆ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಶ್ರದ್ಧೆಯಿಂದ ಪ್ರಾರ್ಥಿಸಿದ್ದೇವೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ತಾಯಿಯ ಆಶೀರ್ವಾದ ಸದಾ ಇರಲಿದೆ.” “ಈ ಬಾರಿ ಮಳೆರಾಯನ ಕೃಪೆಯಿಂದ ನದಿಗಳು ತುಂಬಿ ಹರಿಯುತ್ತಿರುವುದು ಸಂತಸ ತಂದಿದೆ. ನಮ್ಮ ಭಾಗದ ರೈತರ, ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡುವಂತಾಗಲಿ ಮತ್ತು ಪ್ರತಿಯೊಬ್ಬ ನಾಗರಿಕನಿಗೂ ತಾಯಿ ತುಂಗಾದೇವಿಯು ಆಯುರಾರೋಗ್ಯ, ಸುಖ-ಶಾಂತಿ ನೀಡಿ ಸಲಹಲಿ ಎಂದರು.
ನದಿಗೆ ಕೃತಜ್ಞತೆ ಸಲ್ಲಿಸುವ ಈ ಪವಿತ್ರ ಪರಂಪರೆಯ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಯೋಜಕ ದತ್ತಾತ್ರಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಗರ ಅಧ್ಯಕ್ಷ ಮೋಹನ್ ರೆಡ್ಡಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ ಅವರು ಉಪಸ್ಥಿತರಿದ್ದರು. ಇವರೊಂದಿಗೆ ಬಿಜೆಪಿ ಶಿವಮೊಗ್ಗ ಜಿಲ್ಲಾ ಮತ್ತು ನಗರ ಘಟಕದ ಪದಾಧಿಕಾರಿಗಳು, ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿ ತಾಯಿ ತುಂಗೆಗೆ ನಮನ ಸಲ್ಲಿಸಿದರು.

