Sat. Aug 29th, 2026

ಸ್ಯಾಂಡಲ್‌ವುಡ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಾರಾ ರವಿಚಂದ್ರನ್? ಏನಿದು ಹೊಸ ಅಪ್‌ಡೇಟ್?

Share this with Friends

ಬೆಂಗಳೂರು: ಸ್ಯಾಂಡಲ್‌ವುಡ್‌ನ ದಶಕಗಳ ಸಾಮ್ರಾಟ, ‘ಕ್ರೇಜಿ ಸ್ಟಾರ್’ ವಿ. ರವಿಚಂದ್ರನ್ ಶೀಘ್ರದಲ್ಲೇ ಶಾಸನಸಭೆಯ ಅಂಗಳಕ್ಕೆ ಕಾಲಿಡಲಿದ್ದಾರೆಯೇ? ರಾಜಕೀಯ ವಲಯ ಮತ್ತು ಚಿತ್ರರಂಗದಲ್ಲಿ ಈಗ ಇಂತದ್ದೊಂದು ಭಾರಿ ಚರ್ಚೆ ಮುನ್ನೆಲೆಗೆ ಬಂದಿದೆ. ಕಲಾ ಲೋಕದಿಂದ ವಿಧಾನ ಪರಿಷತ್‌ನ (MLC) ಖಾಲಿ ಇರುವ ಸ್ಥಾನಗಳಿಗೆ ನಟ, ನಿರ್ದೇಶಕ ರವಿಚಂದ್ರನ್ ಅವರನ್ನು ನಾಮನಿರ್ದೇಶನ ಮಾಡಲು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂಬ ಗುಸುಗುಸು ಗಾಂಧಿನಗರದಿಂದ ವಿಧಾನಸೌಧದವರೆಗೂ ಜೋರಾಗಿ ಕೇಳಿಬರುತ್ತಿದೆ.

ಬಾಲ್ಯದ ಸ್ನೇಹ ಮತ್ತು ರಾಜಕೀಯ ತಂತ್ರಗಾರಿಕೆ:

ಈ ಸಂಭಾವ್ಯ ರಾಜಕೀಯ ಬೆಳವಣಿಗೆಯ ಹಿಂದೆ ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಡಿ.ಕೆ. ಶಿವಕುಮಾರ್ ಹಾಗೂ ರವಿಚಂದ್ರನ್ ಇಬ್ಬರೂ ಬಾಲ್ಯದ ಸ್ನೇಹಿತರು. ಇತ್ತೀಚೆಗಷ್ಟೇ ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರು ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ಈ ರಾಜಕೀಯ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಮೂಡಿಸಿದೆ. ಈ ಭೇಟಿಯ ಬೆನ್ನಲ್ಲೇ, ಚಿತ್ರರಂಗ ಹಾಗೂ ಕಲಾ ಕೋಟಾದಡಿ ರವಿಚಂದ್ರನ್ ಅವರ ಹೆಸರನ್ನು ಅಂತಿಮಗೊಳಿಸಲು ಹೈಕಮಾಂಡ್ ಮಟ್ಟದಲ್ಲೂ ಒಲವು ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಹಂಸಲೇಖ ಇಂಗಿತ; ಗಂಭೀರ ಚರ್ಚೆ:

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಾದಬ್ರಹ್ಮ ಹಂಸಲೇಖ ಅವರು, “ಡಿ.ಕೆ. ಶಿವಕುಮಾರ್ ಅಧಿಕಾರದಲ್ಲಿರುವಾಗ ರವಿಚಂದ್ರನ್ ಶೀಘ್ರದಲ್ಲೇ ಎಂಎಲ್‌ಸಿ ಆಗಲಿದ್ದಾರೆ” ಎಂದು ಮಾರ್ಮಿಕವಾಗಿ ನುಡಿದಿದ್ದರು. ಆಗ ಅದು ಕೇವಲ ‘ಮ್ಯೂಸಿಕ್ ಲವಿಂಗ್ ಸಿನಿಮಾ’ (MLC) ಎಂಬ ತಮಾಷೆಯ ಅರ್ಥದಲ್ಲಿದ್ದರೂ, ಈಗ ಅದು ನಿಜವಾದ ರಾಜಕೀಯ ಹಾದಿಯಾಗಿ ಬದಲಾಗುತ್ತಿದೆ. ಹಿಂದೆ ಉಮಾಶ್ರೀ, ಜಯಮಾಲಾ, ಬಿ. ಜಯಶ್ರೀ, ದೊಡ್ಡರಂಗೇಗೌಡ, ತಾರಾ ಅನುರಾಧಾ ಅವರಂತಹ ಕಲಾವಿದರು ಚಿತ್ರರಂಗ ಹಾಗೂ ಸಾಹಿತ್ಯ ಕ್ಷೇತ್ರದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದರು. ಅದೇ ಹಾದಿಯಲ್ಲಿ ರವಿಚಂದ್ರನ್ ಅವರಂತಹ ದೊಡ್ಡ ತಾರೆಯನ್ನು ಕರೆತರುವ ಮೂಲಕ ಚಿತ್ರರಂಗದ ವಿಶ್ವಾಸ ಗಳಿಸುವುದು ಹಾಗೂ ಹಳೆಯ ಸ್ನೇಹಕ್ಕೆ ಗೌರವ ಕೊಡುವುದು ಸರ್ಕಾರದ ರಾಜಕೀಯ ತಂತ್ರಗಾರಿಕೆಯೂ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಅಧಿಕೃತ ಮುದ್ರೆ ಬಾಕಿ:

ರವಿಚಂದ್ರನ್ ಅವರು ಇದುವರೆಗೆ ಯಾವುದೇ ಸಕ್ರಿಯ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡವರಲ್ಲ ಅಥವಾ ಚುನಾವಣಾ ರಾಜಕೀಯಕ್ಕೆ ಇಳಿದವರಲ್ಲ. ಆದರೆ, ಸಾಂಸ್ಕೃತಿಕ ಲೋಕದ ಏಳಿಗೆಗೆ ಇವರ ಅನುಭವವನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಸದ್ಯಕ್ಕೆ ಲಿಸ್ಟ್ ಫೈನಲ್ ಹಂತದಲ್ಲಿದ್ದರೂ, ರಾಜ್ಯ ಸರ್ಕಾರ ಮತ್ತು ರಾಜಭವನದಿಂದ ಈ ಕುರಿತು ಯಾವುದೇ ಅಧಿಕೃತ ಆದೇಶ ಪ್ರಕಟವಾಗಿಲ್ಲ. ಕನಸುಗಾರನ ಈ ಹೊಸ ಇನ್ನಿಂಗ್ಸ್ ರಾಜಕೀಯದಲ್ಲಿ ಯಾವ ರೀತಿಯ ‘ಕ್ರೇಜಿ’ ಅಲೆ ಎಬ್ಬಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

 

 


Share this with Friends

Related Post