ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಸತ್ಯಾಸತ್ಯತೆ ತಿಳಿಯದೆ ‘ಜಾಂಬಿ ಡ್ರಗ್’ (Zombie Drug) ನಂತಹ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜು ಬಳಿ ವ್ಯಕ್ತಿಯೊಬ್ಬರು ವಿಚಿತ್ರವಾಗಿ ವರ್ತಿಸುತ್ತಿರುವ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿತ್ತು. ಇದನ್ನು ಕಂಡ ಸಾರ್ವಜನಿಕರು ನಗರಕ್ಕೆ ಅನಾಹುತಕಾರಿ ಮಾದಕ ವಸ್ತು ಕಾಲಿಟ್ಟಿದೆ ಎಂದು ಆತಂಕಗೊಂಡಿದ್ದರು. ಆದರೆ, ಈ ಬಗ್ಗೆ ತನಿಖೆ ನಡೆಸಿದ ಬಾಗಲೂರು ಪೊಲೀಸರು ಅಸಲಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಅಸಲಿಯತ್ತು ಏನು?
ಪೊಲೀಸರು ವಶಕ್ಕೆ ಪಡೆದ ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಅವರ ದೇಹದಲ್ಲಿ ಯಾವುದೇ ರೀತಿಯ ಮಾದಕ ದ್ರವ್ಯದ ಅಂಶ ಪತ್ತೆಯಾಗಿಲ್ಲ. ತೀವ್ರವಾದ ಸಂಧಿವಾತದಿಂದ (Arthritis) ಬಳಲುತ್ತಿದ್ದ ಆ ವ್ಯಕ್ತಿ, ವೈದ್ಯರು ನೀಡಿದ್ದ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿದ್ದರು. ಇದರ ಜೊತೆಗೆ ಮದ್ಯಪಾನ ಮಾಡಿದ್ದರಿಂದ ಉಂಟಾದ ಅಡ್ಡಪರಿಣಾಮದಿಂದಾಗಿ ಅವರು ದೈಹಿಕ ಸಮತೋಲನ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿದ್ದರು ಎಂಬುದು ವೈದ್ಯಕೀಯ ವರದಿಯಿಂದ ಸಾಬೀತಾಗಿದೆ.
ಪೊಲೀಸರ ಮನವಿ:
ಕಳೆದ ಮೂರು ತಿಂಗಳ ಹಿಂದೆಯಷ್ಟೇ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದಿದ್ದ ಈ ವ್ಯಕ್ತಿಯ ಬಗ್ಗೆ ಸತ್ಯ ತಿಳಿಯದೆ ವಿಡಿಯೋ ಹಂಚಿಕೊಳ್ಳುವುದು ಒಬ್ಬ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುತ್ತದೆ. ಇಂತಹ ದಾರಿ ತಪ್ಪಿಸುವ ಮಾಹಿತಿಗಳನ್ನು ಹಂಚಿ ಸಾರ್ವಜನಿಕರಲ್ಲಿ ಅನಗತ್ಯ ಭೀತಿ ಮೂಡಿಸಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಮಾದಕ ವಸ್ತುಗಳ ವಿರುದ್ಧ ಇಲಾಖೆ ಶೂನ್ಯ ಸಹಿಷ್ಣುತೆ ಹೊಂದಿದ್ದು, ಇಂತಹ ಘಟನೆಗಳು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಕೋರಿದ್ದಾರೆ.

