ಬೆಂಗಳೂರು: ಯುಪಿಎಸ್‌ಸಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಮೇ 24ರ ಭಾನುವಾರ ನಮ್ಮ ಮೆಟ್ರೋ ರೈಲು ಸೇವೆಗಳು ಎಂದಿಗಿಂತ ಒಂದು ಗಂಟೆ ಮುಂಚಿತವಾಗಿ, ಅಂದರೆ ಬೆಳಿಗ್ಗೆ 6:00 ಗಂಟೆಗೆ ಆರಂಭವಾಗಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ.
ಸಾಮಾನ್ಯವಾಗಿ ಭಾನುವಾರಗಳಂದು ಬೆಳಿಗ್ಗೆ 7:00 ಗಂಟೆಗೆ ಮೆಟ್ರೋ ಕಾರ್ಯಚರಣೆ ಆರಂಭವಾಗುತ್ತದೆ. ಆದರೆ ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳು ಸಕಾಲದಲ್ಲಿ ತಲುಪಲು ಅನುಕೂಲವಾಗುವಂತೆ ಈ ವಿಶೇಷ ಬದಲಾವಣೆ ಮಾಡಲಾಗಿದೆ.
ಯಾವೆಲ್ಲಾ ಮಾರ್ಗಗಳಲ್ಲಿ ಮುಂಚಿತವಾಗಿ ಸಂಚಾರ?
ಮೆಟ್ರೋದ ಎಲ್ಲಾ ಪ್ರಮುಖ ಮಾರ್ಗಗಳ ಕೊನೆಯ ನಿಲ್ದಾಣಗಳಿಂದ ಬೆಳಿಗ್ಗೆ 6:00 ಗಂಟೆಗೆ ರೈಲುಗಳು ಹೊರಡಲಿವೆ:
ನೇರಳೆ ಮಾರ್ಗ: ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಚಲ್ಲಘಟ್ಟ.
ಹಸಿರು ಮಾರ್ಗ: ಮಾದಾವರ ಮತ್ತು ರೇಷ್ಮೆ ಸಂಸ್ಥೆ.
ಹಳದಿ ಮಾರ್ಗ: ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ.
ಪರೀಕ್ಷಾರ್ಥಿಗಳು ಹಾಗೂ ಸಾರ್ವಜನಿಕರು ಈ ಬದಲಾವಣೆಯ ಸದುಪಯೋಗಪಡಿಸಿಕೊಳ್ಳಲು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ. ಭಾನುವಾರ ಪರೀಕ್ಷೆ ಇರುವುದರಿಂದ ಕೊನೆಯ ಕ್ಷಣದ ನೂಕುನುಗ್ಗಲು ತಪ್ಪಿಸಲು ಅಭ್ಯರ್ಥಿಗಳು ಮುಂಚಿತವಾಗಿ ಪ್ರಯಾಣಿಸುವುದು ಸೂಕ್ತ.

