Thu. Jul 16th, 2026

ಚಿನ್ನಸ್ವಾಮಿ ಕ್ರೀಡಾಂಗಣ ದುರಂತ: ಆರೋಪಿತರೆಲ್ಲಾ ನಿರ್ದೋಶಿಗಳಾದರೆ 11 ಜನರ ಸಾವಿಗೆ ಕಾರಣ ಯಾರು: ಆರ್. ಅಶೋಕ್!

Share this with Friends

ಬೆಂಗಳೂರು: ಐಪಿಎಲ್ ವಿಜಯೋತ್ಸವದ ವೇಳೆ ಸಿಲಿಕಾನ್ ಸಿಟಿಯಲ್ಲಿ ನಡೆದ ಭೀಕರ ಕಾಲ್ತುಳಿತ ಪ್ರಕರಣದ ತನಿಖೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ದೋಷಮುಕ್ತಗೊಳಿಸಿರುವುದನ್ನು  ವಿಪಕ್ಷ ನಾಯಕ ಆರ್. ಅಶೋಕ್ ಕಠಿಣ ಪದಗಳಲ್ಲಿ ಖಂಡಿಸಿದ್ದಾರೆ. ಪ್ರಸ್ತುತ ಸರ್ಕಾರದ ತನಿಖೆಗಳು ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಸಂತ್ರಸ್ತರ ಹೆತ್ತವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅವರು ನೇರ ಆರೋಪ ಮಾಡಿದ್ದಾರೆ.

ಈ ಭೀಕರ ದುರಂತಕ್ಕೆ ಅಂದಿನ ಆಡಳಿತದ ತಪ್ಪು ನಿರ್ಧಾರಗಳೇ ನೇರ ಕಾರಣ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಆರ್. ಅಶೋಕ್ ಕಿಡಿಕಾರಿದ್ದಾರೆ. ಅವರ ಪ್ರಮುಖ ಆಕ್ಷೇಪಗಳು ಇಲ್ಲಿವೆ:

ಅಪಕ್ವ ನಿರ್ಧಾರ: ಒಂದೇ ದಿನದಲ್ಲಿ ಎರಡು ಕಡೆ ಐಪಿಎಲ್ ವಿಜಯೋತ್ಸವದ ಕಾರ್ಯಕ್ರಮಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಠಾತ್ ಅನುಮತಿ ನೀಡಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಯಿತು.

ಫೋಟೋಶೂಟ್ ವಿವಾದ: ಕ್ರೀಡಾಂಗಣದ ಹೊರಗೆ ಅಮಾಯಕರ ಪ್ರಾಣ ಹೋಗುತ್ತಿದ್ದರೂ, ಅಂದಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಾವುಟ ಹಿಡಿದು ಫೋಟೋಶೂಟ್‌ಗೆ ಪೋಸ್ ಕೊಡುವುದರಲ್ಲಿ ಬ್ಯುಸಿಯಾಗಿದ್ದರು.

ಎಚ್ಚರಿಕೆ ನಿರ್ಲಕ್ಷ್ಯ: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದರೂ, ಅದನ್ನು ಲೆಕ್ಕಿಸದೆ ವಿಧಾನಸೌಧದ ಮುಂಭಾಗ ಕಾರ್ಯಕ್ರಮ ನಡೆಸಲೇಬೇಕೆಂದು ಅಂದಿನ ಡಿಪಿಎಆರ್ (DPAR) ಕಾರ್ಯದರ್ಶಿ ಸತ್ಯವತಿ ಹಠ ಹಿಡಿದು ಆದೇಶಿಸಿದ್ದರು.

ಮೇಲ್ವಿಚಾರಣೆಯ ವೈಫಲ್ಯ: ಇಡೀ ವ್ಯವಸ್ಥೆಯ ಸಂಪೂರ್ಣ ಉಸ್ತುವಾರಿ ಮತ್ತು ಮೇಲ್ವಿಚಾರಣೆ ನಡೆಸುತ್ತಿದ್ದವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಆಗಿದ್ದರು.

ಅಮಾಯಕರ ಸಾವಿಗೆ ಹೊಣೆ ಯಾರು?

“ಇಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಹಾಗೂ ಡಿಪಿಎಆರ್ ಕಾರ್ಯದರ್ಶಿ ಯಾರದ್ದೂ ತಪ್ಪಿಲ್ಲ ಎನ್ನುವಂತೆ ಬಿಂಬಿಸಲಾಗುತ್ತಿದೆ. ಈಗ ಪೊಲೀಸ್ ಅಧಿಕಾರಿಗಳನ್ನೂ ತನಿಖೆಯಿಂದ ಮುಕ್ತಗೊಳಿಸಲಾಗಿದೆ” ಎಂದು ಅಶೋಕ್ ಆಕ್ರೋಶ ಹೊರಹಾಕಿದ್ದಾರೆ. ಹಾಗಾದರೆ ಅಂದು ಪ್ರಾಣ ಕಳೆದುಕೊಂಡ 11 ಅಮಾಯಕ ಯುವಕ-ಯುವತಿಯರ ದಾರುಣ ಸಾವಿಗೆ ಅಸಲಿ ಕಾರಣ ಯಾರು? ಅವರು ತಾವಾಗಿಯೇ ಬಂದು ಸತ್ತರೇ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಈ ಹಿಂದೆ ಸದನದಲ್ಲಿ ಇದರ ಬಗ್ಗೆ ಗಂಭೀರ ಚರ್ಚೆಯಾದಾಗಲೇ ನಾನು ಗಂಟಲು ಹರಿದುಕೊಂಡು ಹೇಳಿದ್ದೆ. ಈ ಸರ್ಕಾರದ ಯಾವುದೇ ತನಿಖೆಗಳೂ ಕೇವಲ ಪ್ರಕರಣವನ್ನು ಹಳ್ಳ ಹಿಡಿಸುವ ತಂತ್ರವೇ ಹೊರತು, ನೊಂದ ಹೆತ್ತವರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಉದ್ದೇಶ ಆಡಳಿತ ಪಕ್ಷಕ್ಕಿಲ್ಲ ಎಂದು ಅವರು ದೂರಿದ್ದಾರೆ.

ಕಣ್ಣೀರಿನ ಶಾಪ ನಿಶ್ಚಿತ!

ಅಧಿಕಾರದ ಮದದಲ್ಲಿ ಅಮಾಯಕರ ರಕ್ತ ಹೀರಿದ ನಿಮಗೆ ಆ ತಾಯಂದಿರ ಕಣ್ಣೀರಿನ ಶಾಪ ತಟ್ಟದೇ ಇರದು. ಅಧಿಕಾರ ಎಂಬುದು ಯಾರಿಗೂ ಶಾಶ್ವತವಲ್ಲ, ರಾಜ್ಯದ ಜನತೆ ಯಾವುದನ್ನೂ ಮರೆತಿಲ್ಲ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿ ಎಚ್ಚರಿಕೆ ನೀಡಿದ್ದಾರೆ. ಈ ಸರ್ಕಾರಕ್ಕೆ ಮುಂಬರುವ ದಿನಗಳಲ್ಲಿ ಜನತೆಯೇ ತಕ್ಕ ಶಾಸ್ತಿ ಮಾಡುವುದು ನಿಶ್ಚಿತ ಎಂದು ಆರ್. ಅಶೋಕ್ ಭವಿಷ್ಯ ನುಡಿದಿದ್ದಾರೆ.

 

 


Share this with Friends

Related Post