ಬೆಂಗಳೂರು:ರಾಜ್ಯ ರಾಜಕಾರಣದ ಸದ್ಯದ ಬಿಸಿಬಿಸಿ ವಿದ್ಯಮಾನಗಳಾದ ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ವಿಳಂಬ ಹಾಗೂ ಬಿಡದಿ ಟೌನ್‌ಶಿಪ್ ಪಾದಯಾತ್ರೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀಕ್ಷ್ಣ ಮತ್ತು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಹಲವು ನೇರ ಪ್ರಶ್ನೆಗಳಿಗೆ ಸಿಎಂ ತಮ್ಮದೇ ಶೈಲಿಯಲ್ಲಿ ಚಟಾಕಿ ಹಾರಿಸಿದರು.ಶಾಸಕ ಕೃಷ್ಣಪ್ಪ ಅವರು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಕುರಿತು ಉತ್ತರಿಸಿದ ಸಿಎಂ, “ಸಚಿವ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ, ಎಲ್ಲರೂ ಆಕಾಂಕ್ಷಿಗಳಾಗಿ ಕೇಳುತ್ತಾರೆ” ಎಂದರು. ಸಚಿವ ಎಂ.ಸಿ. ಸುಧಾಕರ್ ಸೇರಿದಂತೆ ಇತರ ನಾಯಕರ ಅಸಮಾಧಾನದ ಕುರಿತು ಕೇಳಿದಾಗ, “ಪಕ್ಷದಲ್ಲಿ ಯಾರಿಗೂ ಅಸಮಾಧಾನವಿಲ್ಲ. ಕೆಲವು ಹಿರಿಯ ನಾಯಕರಿಗೆ ಜವಾಬ್ದಾರಿ ನೀಡಬೇಕಾಗುತ್ತದೆ, ನಾವೆಲ್ಲವನ್ನೂ ಸೌಹಾರ್ದಯುತವಾಗಿ ಬಗೆಹರಿಸುತ್ತೇವೆ” ಎಂದು ಆಶ್ವಾಸನೆ ನೀಡಿದರು. ಇನ್ನು ಸಂಪುಟದಲ್ಲಿ ‘ಸಣ್ಣ ಸರ್ಜರಿ’ಯಾಗುವ ವದಂತಿಗಳ ಕುರಿತು ನಗುತ್ತಲೇ, “ಮೊದಲು ಮಾಧ್ಯಮಗಳಿಗೆ ಸರ್ಜರಿ ಮಾಡಬೇಕು ಎಂದುಕೊಂಡಿದ್ದೇವೆ” ಎಂದು ವ್ಯಂಗ್ಯವಾಡಿದರು.
ಖಾತೆ ಹಂಚಿಕೆ ವಿಳಂಬಕ್ಕೆ ತಿರುಗೇಟು:
ಖಾತೆ ಹಂಚಿಕೆ ಪ್ರಕ್ರಿಯೆ ತಡವಾಗುತ್ತಿರುವ ಕುರಿತು ವಿರೋಧ ಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಸಿಎಂ, “ಹಿಂದೆ ಯಡಿಯೂರಪ್ಪ ಅವರು ಏಕಾಂಗಿಯಾಗಿ ಎಷ್ಟು ದಿನಗಳ ಕಾಲ ಸರ್ಕಾರ ನಡೆಸಿದ್ದರು? ಇನ್ನು ದೆಹಲಿಯಲ್ಲಿ ಎಷ್ಟು ದಿನಗಳ ಕಾಲ ಸರ್ಕಾರ ನಡೆದಿತ್ತು?” ಎಂದು ಪ್ರಶ್ನಿಸುವ ಮೂಲಕ ವಿಪಕ್ಷಗಳ ಬಾಯಿ ಮುಚ್ಚಿಸಿದರು. ಇದೇ ವೇಳೆ ಮಹಿಳಾ ಸಚಿವರ ಆಯ್ಕೆಯ ಕುರಿತು ಮಾತನಾಡಿ, ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿಯೇ ನೂತನ ಸಚಿವರಿಗೆ ಪ್ರಮಾಣವಚನ ಮಾಡಿಸಲಾಗುವುದು ಎಂದರು.
ಬಲವಂತದ ಭೂಸ್ವಾಧೀನ ಇಲ್ಲ – ಬಿಡದಿ ಪಾದಯಾತ್ರೆಗೆ ಟಾಂಗ್:
ಬಿಡದಿ ಟೌನ್‌ಶಿಪ್ ವಿಚಾರವಾಗಿ ಪ್ರತಿಪಕ್ಷಗಳು ನಡೆಸಲುದ್ದೇಶಿಸಿರುವ ಪಾದಯಾತ್ರೆಯ ಕುರಿತು ಪ್ರತಿಕ್ರಿಯಿಸಿದ ಅವರು, “ಅವರು ಕೇವಲ ರಾಜಕೀಯ ಅಜೆಂಡಾ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ. ಅವರು ಮಾಡುವುದನ್ನು ನಾನು ತಪ್ಪು ಎನ್ನಲ್ಲ, ಮಾಡಲಿ. ಆದರೆ ನಾನಂತೂ ರೈತರಿಂದ ಬಲವಂತವಾಗಿ ಯಾವುದೇ ಭೂಸ್ವಾಧೀನ ಮಾಡಲ್ಲ. ರೈತರ ಅಭಿಪ್ರಾಯ ಆಲಿಸಲು ಈಗಾಗಲೇ ಸಮಿತಿ ರಚಿಸಲಾಗಿದ್ದು, ಒಂದು ತಿಂಗಳಲ್ಲಿ ವರದಿ ಬರಲಿದೆ. ಕಾನೂನು ಹಾಗೂ ಸಾಂಪ್ರದಾಯಿಕ ನಿಯಮಗಳ ಪ್ರಕಾರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದರು.
ಇತರ ಪ್ರಮುಖ ವಿಷಯಗಳು:
2028ರ ಅಜೆಂಡಾ: 2028ಕ್ಕೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಎಲ್ಲ ನಾಯಕರು ಒಪ್ಪಿದ್ದಾರೆ ಎಂದು ಸಿಎಂ ತಿಳಿಸಿದರು.
ನಾಗೇಂದ್ರ ರಾಜೀನಾಮೆ: ಮಾಜಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ಆಗ್ರಹಿಸುತ್ತಿರುವ ಕುರಿತು “ಅವರು ಒಳ್ಳೆಯದನ್ನೇ ಮಾಡಲಿ” ಎಂದು ಲಘುವಾಗಿ ತೇಲಿಬಿಟ್ಟರು.
ಅಭಿಯಾನ ಮತ್ತು ಮತಪಟ್ಟಿ ವಿಚಾರ: ‘ನನ್ನ ಖಾತೆ ನನ್ನ ಹಕ್ಕು’ ಅಭಿಯಾನವು ಅಧಿಕಾರಿಗಳು ಬೇರೆ ಪ್ರಕ್ರಿಯೆಯಲ್ಲಿ ನಿರತರಾಗಿದ್ದರಿಂದ ವಿಳಂಬವಾಗಿದ್ದು, 15 ದಿನಗಳ ನಂತರ ಚಾಲನೆ ನೀಡಲಾಗುವುದು. ಇನ್ನು ಮತಪಟ್ಟಿಯಿಂದ ಭಾರಿ ಪ್ರಮಾಣದ ಮತದಾರರ ಹೆಸರು ಕೈಬಿಡುತ್ತಿರುವ ಆರೋಪದ ಕುರಿತು ಪ್ರತ್ಯೇಕವಾಗಿ ಮಾತನಾಡುವುದಾಗಿ ಸಿಎಂ ಹೇಳಿದರು.

