ಬೆಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿ, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಪ್ರಾದೇಶಿಕ ಪ್ರಾತಿನಿಧ್ಯದ ಧ್ವನಿ ಜೋರಾಗಿದೆ. ಹೊಸ ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಕನಿಷ್ಠ ಎರಡು ಡಿಸಿಎಂ (ಉಪಮುಖ್ಯಮಂತ್ರಿ) ಹಾಗೂ ಹತ್ತು ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ ಆರ್. ಮೇಟಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷದ ಪ್ರಮುಖ ಉನ್ನತ ಹುದ್ದೆಗಳಾದ ಸಿಎಂ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಗಳು ದಕ್ಷಿಣ ಕರ್ನಾಟಕದ ಪಾಲಾಗಿವೆ. ಆದರೆ, ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಒಳಗೊಂಡ ಉತ್ತರ ಕರ್ನಾಟಕ ಭಾಗಕ್ಕೆ ಕೇವಲ ಐದು ಸಚಿವ ಸ್ಥಾನಗಳನ್ನು ಮಾತ್ರ ನೀಡಲಾಗಿದ್ದು, ಇದು ತಾರತಮ್ಯದಿಂದ ಕೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಕೊಡುಗೆ ಅಪಾರ:
ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಾದರೂ ಉತ್ತರ ಕರ್ನಾಟಕದ ಪಾತ್ರ ನಿರ್ಣಾಯಕವಾಗಿರುತ್ತದೆ. ಪ್ರಸ್ತುತ ಈ ಭಾಗದ 14 ಜಿಲ್ಲೆಗಳ ಒಟ್ಟು 96 ವಿಧಾನಸಭಾ ಕ್ಷೇತ್ರಗಳ ಪೈಕಿ 65ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಗೆದ್ದು ಬಂದಿದ್ದಾರೆ. ಆದ್ದರಿಂದ ಪ್ರತಿ ಜಿಲ್ಲೆಯ ಶಾಸಕರಿಗೂ ಸಚಿವ ಸ್ಥಾನದ ಅವಕಾಶ ಸಿಗಬೇಕು. ಅದರಲ್ಲೂ ರಾಜ್ಯದ ದೊಡ್ಡ ಜಿಲ್ಲೆಯಾದ ಬೆಳಗಾವಿಗೆ ಕನಿಷ್ಠ ಮೂರು ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಜಾರಕಿಹೊಳಿ, ಎಂ.ಬಿ. ಪಾಟೀಲ್‌ಗೆ ಡಿಸಿಎಂ ಪಟ್ಟ?
ಉತ್ತರ ಕರ್ನಾಟಕ ಭಾಗದಲ್ಲಿ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್ ಹಾಗೂ ಈಶ್ವರ ಖಂಡ್ರೆ ಅವರಂತಹ ಹಿರಿಯ ಮತ್ತು ಅನುಭವಿ ನಾಯಕರಿದ್ದಾರೆ. ಇವರಲ್ಲಿ ಇಬ್ಬರು ಹಿರಿಯರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಈ ಭಾಗಕ್ಕೆ ನ್ಯಾಯ ಒದಗಿಸಬೇಕು ಎಂದು ಮೇಟಿ ಆಗ್ರಹಿಸಿದರು.
ಜಿಲ್ಲಾವಾರು ಪ್ರಾತಿನಿಧ್ಯಕ್ಕೆ ಆಗ್ರಹ:
ಮಹಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಕರ ಪಾಗೋಜಿ ಮಾತನಾಡಿ, “ರಾಜ್ಯದ ಅರ್ಧದಷ್ಟು ಭೌಗೋಳಿಕ ವ್ಯಾಪ್ತಿ ಹೊಂದಿರುವ ಉತ್ತರ ಕರ್ನಾಟಕದಿಂದ ಈ ಬಾರಿ ಅತಿ ಹೆಚ್ಚು ಸಂಖ್ಯೆಯ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಈ ಭಾಗದ ಪ್ರತಿ ಜಿಲ್ಲೆಗೂ ಸಚಿವ ಸ್ಥಾನದ ಪ್ರಾತಿನಿಧ್ಯ ನೀಡಿದರೆ ಮಾತ್ರ ಜಿಲ್ಲಾ ಮಟ್ಟದಲ್ಲಿ ಸಮಗ್ರ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ” ಎಂದು ಪ್ರತಿಪಾದಿಸಿದರು.
ಇದೇ ವೇಳೆ ಮಾತನಾಡಿದ ಉತ್ತರ ನವ ನಿರ್ಮಾಣ ವೇದಿಕೆಯ ಗೌರವ ಅಧ್ಯಕ್ಷರಾದ ಬಸವರಾಜ ದಿಂಡೂರ ಅವರು, “ನಾವು ಯಾವುದೇ ಒಂದು ನಿರ್ದಿಷ್ಟ ಸಮುದಾಯ ಅಥವಾ ಜಾತಿಗೆ ಸ್ಥಾನ ನೀಡುವಂತೆ ಕೇಳುತ್ತಿಲ್ಲ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಹಾಗೂ ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಿರಿಯ ನಾಯಕರಿಗೆ ಡಿಸಿಎಂ ಪಟ್ಟ ನೀಡಬೇಕು” ಎಂದು ಸ್ಪಷ್ಟಪಡಿಸಿದರು.
ಈ ಪ್ರಮುಖ ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಬಸವರಾಜ ಬೀಳೂರು, ಎಂ.ವಿ. ನೆಗಳೂರು, ಕಾರ್ಯದರ್ಶಿ ಬಸಯ್ಯ ನಂದಿಕೋಲ, ಸಹ ಸಂಘಟನಾ ಕಾರ್ಯದರ್ಶಿಗಳಾದ ಶಾಂತೇಶ್ ಮಠ, ರಾಮನಗೌಡ ಬಿರಾದಾರ ಹಾಗೂ ಸಮಾಜ ಸೇವಕ ಮುನಿಕೃಷ್ಣ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

