ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಹದಿಹರೆಯದ ಗರ್ಭಧಾರಣೆ (Teenage Pregnancy) ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಸರ್ಕಾರವು, ಇಂದಿನಿಂದ (ಏಪ್ರಿಲ್ 7) ಅನ್ವಯವಾಗುವಂತೆ ಪ್ರತಿ ಪ್ರಕರಣದ ಕಡ್ಡಾಯ ಲೆಕ್ಕಪರಿಶೋಧನೆ (Mandatory Audit) ನಡೆಸಲು ಮಹತ್ವದ ಆದೇಶ ಹೊರಡಿಸಿದೆ. 10 ರಿಂದ 18 ವರ್ಷದೊಳಗಿನ ಬಾಲಕಿಯರಲ್ಲಿ ಕಂಡುಬರುವ ಗರ್ಭಧಾರಣೆಯ ಪ್ರತಿಯೊಂದು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ವರದಿ ಸಲ್ಲಿಸುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.
ಏನಿದು ಹೊಸ ಮಾರ್ಗಸೂಚಿ?
ಸರ್ಕಾರದ ಹೊಸ ಆದೇಶದನ್ವಯ, ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಹದಿಹರೆಯದ ಗರ್ಭಧಾರಣೆಯ ಪ್ರಕರಣಗಳನ್ನು ಗುರುತಿಸಿದ ತಕ್ಷಣ ‘ರಿಪ್ರೊಡಕ್ಟಿವ್ ಅಂಡ್ ಚೈಲ್ಡ್ ಹೆಲ್ತ್’ (RCH) ಪೋರ್ಟಲ್‌ನಲ್ಲಿ ನೋಂದಾಯಿಸಬೇಕು. ಇಂತಹ ಪ್ರಕರಣಗಳನ್ನು ಕೇವಲ ವೈದ್ಯಕೀಯ ವಿಷಯವಾಗಿ ನೋಡದೆ, ಸಾಮಾಜಿಕ ಪಿಡುಗಾಗಿ ಪರಿಗಣಿಸಿ ಅದರ ಮೂಲ ಕಾರಣಗಳನ್ನು ಪತ್ತೆಹಚ್ಚುವುದು ಈ ಆಡಿಟ್‌ನ ಮುಖ್ಯ ಉದ್ದೇಶವಾಗಿದೆ.
ಪೊಕ್ಸೊ (POCSO) ಕಾಯ್ದೆ ಅಡಿ ಕ್ರಮ ಅನಿವಾರ್ಯ:
18 ವರ್ಷದೊಳಗಿನ ಬಾಲಕಿಯರ ಗರ್ಭಧಾರಣೆಯು ಕಾನೂನುಬಾಹಿರ ಹಾಗೂ ಅಪರಾಧ ಪ್ರಕ್ರಿಯೆಯಾಗಿರುವುದರಿಂದ, ಇಂತಹ ಪ್ರಕರಣಗಳು ಕಂಡುಬಂದಲ್ಲಿ ವೈದ್ಯರು ಕೂಡಲೇ ಸ್ಥಳೀಯ ಪೊಲೀಸ್ ಠಾಣೆ ಅಥವಾ ವಿಶೇಷ ಬಾಲಾಪರಾಧಿ ಪೊಲೀಸ್ ಘಟಕಕ್ಕೆ (SJPU) ಮಾಹಿತಿ ನೀಡಬೇಕು. ಒಂದು ವೇಳೆ ಪ್ರಕರಣವನ್ನು ಮುಚ್ಚಿಡಲು ಪ್ರಯತ್ನಿಸಿದರೆ ಅಥವಾ ವರದಿ ಮಾಡಲು ವಿಫಲರಾದರೆ, ಸಂಬಂಧಪಟ್ಟ ವೈದ್ಯರು ಅಥವಾ ಆಸ್ಪತ್ರೆ ಆಡಳಿತ ಮಂಡಳಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಉಸ್ತುವಾರಿ ಯಾರಿಗೆ?
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳು (DHO) ಈ ಲೆಕ್ಕಪರಿಶೋಧನೆಯ ಸಂಪೂರ್ಣ ಜವಾಬ್ದಾರಿ ಹೊಂದಿರಲಿದ್ದಾರೆ. ರಾಜ್ಯ ಮಟ್ಟದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ (RBSK) ಉಪ ನಿರ್ದೇಶಕರು ಇದರ ಉಸ್ತುವಾರಿ ವಹಿಸಲಿದ್ದಾರೆ. ಪ್ರತಿಯೊಂದು ಪ್ರಕರಣವನ್ನು ‘ತಡೆಗಟ್ಟಬಹುದಾದ’ ಅಥವಾ ‘ತಡೆಗಟ್ಟಲಾಗದ’ ಎಂದು ವರ್ಗೀಕರಿಸಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ.
ವಸತಿ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ:
ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ಪ್ರತಿ 15 ದಿನಕ್ಕೊಮ್ಮೆ ಆರೋಗ್ಯ ತಪಾಸಣೆ ನಡೆಸಬೇಕು. ಯಾವುದೇ ವಿದ್ಯಾರ್ಥಿನಿ ಸತತ ಮೂರು ದಿನಗಳ ಕಾಲ ಶಾಲೆಗೆ ಗೈರುಹಾಜರಾದರೆ, ಆ ಬಗ್ಗೆ ಕೂಡಲೇ ಗ್ರಾಮ ಪಂಚಾಯತ್ ಹಾಗೂ ಮಕ್ಕಳ ಸಹಾಯವಾಣಿ 1098 ಕ್ಕೆ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಬಾಲ್ಯ ವಿವಾಹ ಮತ್ತು ಹದಿಹರೆಯದ ಗರ್ಭಧಾರಣೆಯಿಂದ ಉಂಟಾಗುವ ಶಿಶು ಮರಣ ಹಾಗೂ ತಾಯಿ ಮರಣ ಪ್ರಮಾಣವನ್ನು ತಗ್ಗಿಸಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

