Wed. Jul 8th, 2026

ಬೆಂಗಳೂರಿಗರಿಗೆ ಬಿಗ್ ಅಲರ್ಟ್: ರಸ್ತೆ ಬದಿಯ ಅನಾಥ ವಾಹನಗಳಿಗೆ ಜುಲೈ 10 ರಿಂದ ಬೀಳಲಿದೆ ಕ್ಲಾಂಪ್; ತೆರವು ಮಾಡದಿದ್ದರೆ ಬಹಿರಂಗ ಹರಾಜು!

Share this with Friends

ಬೆಂಗಳೂರು:ರಾಜಧಾನಿಯ ರಸ್ತೆಗಳು, ಫುಟ್‌ಪಾತ್‌ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಾ ವಾರಗಟ್ಟಲೆ ಅನಾಥವಾಗಿ ಬಿದ್ದಿರುವ ಹಳೇ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಸಂಚಾರ ಪೊಲೀಸ್ ಇಲಾಖೆ ಜಂಟಿಯಾಗಿ ಸಜ್ಜಾಗಿವೆ. ಜಿಬಿಎ ಕಾಯ್ದೆ 2024, ಸೆಕ್ಷನ್ 324ರ ಅನ್ವಯ ಬೆಂಗಳೂರಿನ ಒಟ್ಟು 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವ ಜುಲೈ 10 ರಿಂದ ಈ ಬೃಹತ್ ಅನಾಥ ವಾಹನಗಳ ತೆರವು ಕಾರ್ಯಾಚರಣೆ ಅಧಿಕೃತವಾಗಿ ಆರಂಭವಾಗಲಿದೆ.

ಅಧಿಕಾರಗಳ ಜಂಟಿ ಕಾರ್ಯಾಚರಣೆ ಮತ್ತು ಕಠಿಣ ಕ್ರಮಗಳು:

ಬೆಂಗಳೂರು ನಗರದ ಸೌಂದರ್ಯೀಕರಣ ಮತ್ತು ಸುಗಮ ಸಂಚಾರಕ್ಕೆ ಧಕ್ಕೆ ತರುತ್ತಿರುವ ವಾಹನಗಳನ್ನು ಗುರುತಿಸಿ ತೆರವುಗೊಳಿಸಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ಇಲಾಖೆಯು ಈ ಕೆಳಗಿನ ಹಂತಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲಿದೆ:

ಸ್ಟಿಕ್ಕರ್ ನೋಟಿಸ್ ಹಾಗೂ ವೀಲ್ ಕ್ಲಾಂಪ್: ಸಾರ್ವಜನಿಕ ಸ್ಥಳಗಳಲ್ಲಿ ದಿನಗಟ್ಟಲೆ ನಿಲ್ಲಿಸಿರುವ ವಾಹನಗಳನ್ನು ಪತ್ತೆ ಹಚ್ಚಿ, ಅವುಗಳಿಗೆ ಸ್ಥಳದಲ್ಲೇ 7 ದಿನಗಳ ಕಾಲಾವಕಾಶ ನೀಡುವ ಅಧಿಕೃತ ಸ್ಟಿಕ್ಕರ್ ನೋಟಿಸ್ ಅಂಟಿಸಲಾಗುತ್ತದೆ. ಜೊತೆಗೆ ಅದೇ ಸಂದರ್ಭದಲ್ಲಿ ಆ ವಾಹನಗಳ ಚಕ್ರಗಳಿಗೆ ವೀಲ್ ಕ್ಲಾಂಪ್ ಅಳವಡಿಸಲಾಗುತ್ತದೆ.

ವಾಹನ ಜಪ್ತಿ (Towing): ನೋಟಿಸ್ ಜಾರಿಯಾದ 7 ದಿನಗಳ ಒಳಗಾಗಿ ವಾಹನಗಳ ಮಾಲೀಕರು ಬಂದು ತಮ್ಮ ವಾಹನವನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸದಿದ್ದರೆ, ಅಂತಹ ವಾಹನಗಳನ್ನು ಕ್ರೇನ್ ಮುಖಾಂತರ ಎಳೆದುಕೊಂಡು ಹೋಗಿ (ಟೋಯಿಂಗ್) ಜಪ್ತಿ ಮಾಡಲಾಗುತ್ತದೆ.

ಬಹಿರಂಗ ಹರಾಜು ಪ್ರಕ್ರಿಯೆ: ಕಾನೂನುಬದ್ಧವಾಗಿ ಜಪ್ತಿ ಮಾಡಲಾದ ಇಂತಹ ಎಲ್ಲಾ ಅನಾಥ ವಾಹನಗಳನ್ನು ಇಲಾಖೆಯ ನಿಯಮಾವಳಿಗಳ ಪ್ರಕಾರ ಸಾರ್ವಜನಿಕವಾಗಿ ಬಹಿರಂಗ ಹರಾಜು ಹಾಕಲಾಗುತ್ತದೆ.

ವಾಹನ ಮಾಲೀಕರಿಗೆ ಪ್ರಾಧಿಕಾರದ ಅಂತಿಮ ಎಚ್ಚರಿಕೆ:

ಈ ವಿಶೇಷ ಪ್ರಕಟಣೆಯ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ನಗರದ ಜನತೆಯಲ್ಲಿ ಮನವಿ ಮಾಡಿದ್ದಾರೆ. ನಿಮ್ಮ ಯಾವುದೇ ಹಳೆಯ, ಕೆಟ್ಟುಹೋದ ಅಥವಾ ಬಳಸದ ವಾಹನಗಳನ್ನು ರಸ್ತೆ ಬದಿಯಲ್ಲಿ ಇಲ್ಲವೇ ಸರ್ಕಾರಿ ತೆರೆದ ಪ್ರದೇಶಗಳಲ್ಲಿ ನಿಲ್ಲಿಸಿದ್ದರೆ, ಜುಲೈ 10 ರ ಒಳಗಾಗಿ ಕಡ್ಡಾಯವಾಗಿ ಅವುಗಳನ್ನು ನಿಮ್ಮ ಸ್ವಂತ ಜಾಗಗಳಿಗೆ ಸ್ಥಳಾಂತರಿಸಿಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ವಾಹನಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

 

 


Share this with Friends

Related Post