Mon. Jul 27th, 2026

ಅಕ್ರಮ ಮರಳು ಮಾಫಿಯಾಗೆ ‘ಗೂಂಡಾ ಕಾಯ್ದೆ’: ರಾಜ್ಯಾದ್ಯಂತ ಕಟ್ಟುನಿಟ್ಟಿನ ಶೂನ್ಯ ಸಹಿಷ್ಣುತೆ ನೀತಿ ಜಾರಿಗೆ ಡಿಜಿಪಿ ಹೈಲೆವೆಲ್ ಸುತ್ತೋಲೆ

Share this with Friends

ಬೆಂಗಳೂರು: ರಾಜ್ಯದಲ್ಲಿ ದೀರ್ಘಕಾಲದಿಂದ ತಲೆನೋವಾಗಿ ಪರಿಣಮಿಸಿರುವ ಅಕ್ರಮ ಮರಳು ಗಣಿಗಾರಿಕೆ, ಮರಳು ಸಂಗ್ರಹಣೆ ಹಾಗೂ ಕಾನೂನುಬಾಹಿರ ಸಾಗಾಣಿಕೆಯನ್ನು ಸಂಪೂರ್ಣವಾಗಿ ಮಟ್ಟಹಾಕಲು ಸರ್ಕಾರ ಅತ್ಯಂತ ಕಠಿಣ ಹೆಜ್ಜೆ ಇಟ್ಟಿದೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿ ಮತ್ತು ಐಜಿಪಿ) ಕರ್ನಾಟಕದ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP), ಕಮಿಷನರ್‌ಗಳು ಹಾಗೂ ಐಜಿಪಿಗಳಿಗೆ ಸಮಗ್ರವಾದ ನೂತನ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಅದರಂತೆ ಮರಳು ಮಾಫಿಯಾದಲ್ಲಿ ನಿರಂತರವಾಗಿ ಭಾಗಿಯಾಗುವ ಪ್ರಭಾವಿಗಳ ವಿರುದ್ಧ ಇನ್ಮುಂದೆ ನೇರವಾಗಿ ‘ಗೂಂಡಾ ಕಾಯ್ದೆ’ಯಡಿ (Goonda Act) ಕಠಿಣ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಮುಕ್ತ ಅಧಿಕಾರ ನೀಡಲಾಗಿದೆ.

ನೈಸರ್ಗಿಕ ಸಂಪತ್ತಿನ ಲೂಟಿಯ ಜೊತೆಗೆ ಪರಿಸರಕ್ಕೆ ತೀವ್ರ ಹಾನಿ ಉಂಟುಮಾಡುತ್ತಿರುವ ಈ ಅಕ್ರಮ ದಂಧೆಯ ವಿರುದ್ಧ ಸರ್ಕಾರ ‘ಶೂನ್ಯ ಸಹಿಷ್ಣುತೆ (Zero Tolerance)’ ನೀತಿಯನ್ನು ಅಳವಡಿಸಿಕೊಂಡಿದೆ. ಮರಳು ದಂಧೆಯು ಕೇವಲ ಪರಿಸರ ನಾಶ ಮಾತ್ರವಲ್ಲದೆ, ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಸರ್ಕಾರದ ಬೊಕ್ಕಸದ ಆದಾಯಕ್ಕೂ ಭಾರಿ ಧಕ್ಕೆ ತರುತ್ತಿರುವುದರಿಂದ ಇದನ್ನು ಗಂಭೀರ ಅಪರಾಧ ಎಂದು ಪರಿಗಣಿಸಲಾಗಿದೆ.

ಈ ಮಹತ್ತರ ಸುತ್ತೋಲೆಯಲ್ಲಿ ಅಡಕವಾಗಿರುವ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

ಅಂತರರಾಜ್ಯ ಗಡಿಗಳಲ್ಲಿ ಜಂಟಿ ಕಣ್ಗಾವಲು ಹಾಗೂ ಅಧಿಕಾರಿಗಳ ಹೊಣೆಗಾರಿಕೆ:

ಅಕ್ರಮ ಮರಳುಗಾರಿಕೆ ಮತ್ತು ಸಾಗಾಣಿಕೆ ನಡೆಯುವ ಸೂಕ್ಷ್ಮ ಪ್ರದೇಶಗಳನ್ನು ತಕ್ಷಣವೇ ಗುರುತಿಸಿ ಅಲ್ಲಿ ನಿರಂತರ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಯಾವುದೇ ಪ್ರದೇಶದಲ್ಲಿ ಅಕ್ರಮ ನಡೆದರೆ ಅದಕ್ಕೆ ಆಯಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡುವುದಾಗಿ ಸರ್ಕಾರ ಎಚ್ಚರಿಸಿದೆ. ಇದರೊಂದಿಗೆ, ಕರ್ನಾಟಕದ ಗಡಿ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗಗಳಲ್ಲಿ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಗಟ್ಟಲು ಪೊಲೀಸ್ ಇಲಾಖೆಯು ಗಣಿ ಮತ್ತು ಭೂವಿಜ್ಞಾನ, ಕಂದಾಯ ಹಾಗೂ ಅರಣ್ಯ ಇಲಾಖೆಯೊಂದಿಗೆ ಜಂಟಿ ಸಮನ್ವಯ ಸಾಧಿಸಿ ಕಾರ್ಯಾಚರಣೆ ನಡೆಸಲಿದೆ. ಗಡಿಭಾಗದ ತನಿಖಾ ಚೌಕಿಗಳಲ್ಲಿ (Checkposts) ಅಗತ್ಯ ಮೂಲಸೌಕರ್ಯ ಹಾಗೂ ಸಿಸಿಟಿವಿ ಸೇರಿದಂತೆ ಆಧುನಿಕ ಕಣ್ಗಾವಲು ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.

ಗುಪ್ತಚರ ಮಾಹಿತಿ ಆಧರಿಸಿ ದಿಢೀರ್ ದಾಳಿ

ಪ್ರತಿ ಪೊಲೀಸ್ ಠಾಣೆ ಹಾಗೂ ಘಟಕಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಮರಳು ದಂಧೆಯ ನೆಟ್‌ವರ್ಕ್ ಕುರಿತು ಆಂತರಿಕವಾಗಿ ಗುಪ್ತಚರ ಮಾಹಿತಿ (Intelligence Input) ಕಲೆಹಾಕಬೇಕು. ಮಾಹಿತಿ ಸಿಕ್ಕ ತಕ್ಷಣವೇ ಯಾವುದೇ ಮುನ್ಸೂಚನೆ ನೀಡದೆ ಅಕ್ರಮ ಸಂಗ್ರಹಣಾ ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಿ ವಾಹನ ಹಾಗೂ ಮರಳನ್ನು ಜಪ್ತಿ ಮಾಡಬೇಕು ಎಂದು ಆದೇಶಿಸಲಾಗಿದೆ. ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಟಾಸ್ಕ್ ಫೋರ್ಸ್ (ಕಾರ್ಯಪಡೆ) ತಂಡಗಳನ್ನು ಮರು ಸಕ್ರಿಯಗೊಳಿಸಿ, ದಾಳಿಗಳನ್ನು ತೀವ್ರಗೊಳಿಸಲು ಆದೇಶಿಸಲಾಗಿದೆ.

ತಿಂಗಳ ಅಪರಾಧ ಸಭೆಯಲ್ಲಿ ಠಾಣಾವಾರು ಪರಿಶೀಲನೆ

ಉನ್ನತ ಪೊಲೀಸ್ ಅಧಿಕಾರಿಗಳು ನಡೆಸುವ ಪ್ರತಿ ತಿಂಗಳ ಅಪರಾಧ ಪರಿಶೀಲನಾ ಸಭೆಯಲ್ಲಿ (Crime Review Meeting) ಇನ್ಮುಂದೆ ಅಕ್ರಮ ಮರಳುಗಾರಿಕೆ ಪ್ರಕರಣಗಳ ಕುರಿತು ಠಾಣಾವಾರು ಪ್ರತ್ಯೇಕ ಪ್ರಗತಿ ಪರಿಶೀಲನೆ ನಡೆಯಲಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಗಳನ್ನು ನಿಯಮಿತವಾಗಿ ಆಯೋಜಿಸಿ, ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಅಕ್ರಮಗಳನ್ನು ಸಂಪೂರ್ಣವಾಗಿ ಹತೋಟಿಗೆ ತರಲು ನಿರ್ದೇಶನ ನೀಡಲಾಗಿದೆ.

ಅಕ್ರಮ ಚಟುವಟಿಕೆ ಸಹಿಸುವುದಿಲ್ಲ; ಕಠಿಣ ಕಣ್ಗಾವಲು ಇರಿಸುವುದು ನಮ್ಮ ಆದ್ಯತೆ

“ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ರಾಜ್ಯದ ನೈಸರ್ಗಿಕ ಸಂಪತ್ತಿನ ಲೂಟಿ ಮಾತ್ರವಲ್ಲ, ಇದು ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸವಾಲು ಎಸೆಯುವ ಗಂಭೀರ ಅಪರಾಧವಾಗಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅಕ್ರಮ ಮರಳು ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು. ಜೊತೆಗೆ ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧವೂ ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ನೈಸರ್ಗಿಕ ಸಂಪತ್ತಿನ ಸಂರಕ್ಷಣೆ ಮತ್ತು ಕಾನೂನು ಲೋಪವಾಗದಂತೆ ಕಣ್ಗಾವಲು ಇರಿಸುವುದು ಸರ್ಕಾರದ ಆದ್ಯತೆಯಾಗಿದೆ”ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.


Share this with Friends

Related Post