ಬೆಂಗಳೂರು: ಇನ್ನು ಮುಂದೆ ಜಾತಿ ಮತ್ತು ನಿವಾಸ ಪ್ರಮಾಣಪತ್ರಗಳನ್ನು ಪಡೆಯಲು ಕಂದಾಯ ಕಚೇರಿಗಳಿಗೆ ಅಲೆಯುವ ದಿನಗಳು ದೂರವಾಗಿವೆ. ಸಾರ್ವಜನಿಕರ ಮನೆ ಬಾಗಿಲಿಗೇ ಉಚಿತವಾಗಿ ಪ್ರಮಾಣಪತ್ರಗಳನ್ನು ತಲುಪಿಸುವ ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿ ವಿಶೇಷ ಅಭಿಯಾನ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರ ಸೇವೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಉಪಸ್ಥಿತಿಯಲ್ಲಿ ವಿಧಾನಸೌಧದಲ್ಲಿ ಅದ್ಧೂರಿ ಚಾಲನೆ ನೀಡಿದ್ದಾರೆ.
ಸರ್ಕಾರದ ಈ ಡಿಜಿಟಲ್ ಕ್ರಾಂತಿಯಿಂದಾಗಿ ರಾಜ್ಯದ ಕೋಟ್ಯಂತರ ನಾಗರಿಕರಿಗೆ ಕಚೇರಿಗಳ ಅಲೆದಾಟ ಮತ್ತು ದಲ್ಲಾಳಿಗಳ ತೊಂದರೆಯಿಂದ ಮುಕ್ತಿ ಸಿಕ್ಕಂತಾಗಿದೆ.
ಯೋಜನೆಯ ಭಾಗವಾಗಿ ರಾಜ್ಯಾದ್ಯಂತ ಒಟ್ಟು 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣ ಪತ್ರಗಳನ್ನು ಗ್ರಾಮವಾರು ವಿಂಗಡಿಸಿ, ಪಿಡಿಎಫ್ (PDF) ರೂಪದಲ್ಲಿ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಇವುಗಳನ್ನು ಮುದ್ರಿಸಿ ನೇರವಾಗಿ ಸಾರ್ವಜನಿಕರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ಜವಾಬ್ದಾರಿಯನ್ನು ಸ್ಥಳೀಯ ಆಡಳಿತಕ್ಕೆ ವಹಿಸಲಾಗಿದೆ. ಈ ವಿಶೇಷ ಸೌಲಭ್ಯದ ಜೊತೆಗೆ, ಸಾರ್ವಜನಿಕರು ತಾವೇ ಸ್ವತಃ ಉಚಿತವಾಗಿ ಪ್ರಮಾಣಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಕಂದಾಯ ಇಲಾಖೆಯು ವಿಶೇಷ ವೆಬ್‌ಸೈಟ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. ಅಲ್ಲದೆ ಪ್ರತಿಯೊಂದು ಹೋಬಳಿ ಮಟ್ಟದಲ್ಲೂ ನಾಗರಿಕರ ಅನುಕೂಲಕ್ಕಾಗಿ ಉಚಿತ ಮುದ್ರಣದ ಸಹಾಯ ಕೇಂದ್ರಗಳನ್ನು ಸರ್ಕಾರ ತೆರೆದಿದೆ.
ಡಿಜಿಟಲ್ ಲಿಂಕ್ ಮತ್ತು ಸುಲಭ ಲಾಗಿನ್ ವ್ಯವಸ್ಥೆ:
ಮೊಬೈಲ್ ಮತ್ತು ವಾಟ್ಸ್ಆಪ್ ಲಿಂಕ್: ಈಗಾಗಲೇ ರಾಜ್ಯದ ಸುಮಾರು 85 ಲಕ್ಷ ಜಾತಿ ಪ್ರಮಾಣ ಪತ್ರಗಳನ್ನು ನಾಗರಿಕರ ಮೊಬೈಲ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲಾಗಿದ್ದು, ವಾಟ್ಸ್ಆಪ್ ಅಥವಾ ಎಸ್‌ಎಂಎಸ್ (SMS) ಮೂಲಕ ನೇರ ಲಿಂಕ್ ಕಳುಹಿಸಿ ಡೌನ್‌ಲೋಡ್ ಮಾಡಿಕೊಳ್ಳಲು ಅತ್ಯಾಧುನಿಕ ತಾಂತ್ರಿಕ ಅವಕಾಶ ಕಲ್ಪಿಸಲಾಗಿದೆ.
ಶಾಶ್ವತ ನಿವಾಸ ಪ್ರಮಾಣ ಪತ್ರ: ಇಡೀ ರಾಜ್ಯದಾದ್ಯಂತ ಏಕರೂಪದ, ಪಾರದರ್ಶಕ ಮತ್ತು ಸಂಪೂರ್ಣ ಕಾನೂನುಬದ್ಧವಾದ ಚೌಕಟ್ಟಿನಡಿಯಲ್ಲಿ ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಿಸುವ ಮಹತ್ವದ ಸೇವೆಗೂ ಸರ್ಕಾರ ಚಾಲನೆ ನೀಡಿದೆ.
ವಿವಿಧ ಸೇವಾ ಕೇಂದ್ರಗಳಲ್ಲಿ ಅರ್ಜಿ ಲಭ್ಯ: ಅರ್ಹ ನಾಗರಿಕರು ತಮಗೆ ಹತ್ತಿರದ ನಾಡಕಚೇರಿ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರಗಳು ಅಥವಾ ಸರ್ಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಯಾವುದೇ ಅಡೆತಡೆಗಳಿಲ್ಲದೆ ಸುಲಭವಾಗಿ ಅರ್ಜಿ ಸಲ್ಲಿಸಿ ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ.

