ಬೆಂಗಳೂರು/ನವದೆಹಲಿ: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಷ್ಠ ಮಟ್ಟಕ್ಕೆ ತಲುಪಿವೆ. ಸಚಿವ ಸಂಪುಟ ವಿಸರ್ಜನೆಗೊಂಡಿರುವ ಬಗ್ಗೆ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಬೀಳುತ್ತಿದ್ದಂತೆ, ನೂತನ ಮುಖ್ಯಮಂತ್ರಿಯಾಗಲಿರುವ ಡಿ.ಕೆ. ಶಿವಕುಮಾರ್ ಅವರ ಕ್ಯಾಬಿನೆಟ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಶಾಸಕರು ಭಾರಿ ಕಸರತ್ತು ಆರಂಭಿಸಿದ್ದಾರೆ.
ಮುಂಜಾನೆಯೇ ದೆಹಲಿ ತಲುಪಿದ ಹಿರಿಯ ನಾಯಕರು:
ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗಳು ಬಿರುಸುಗೊಳ್ಳುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳ ದೊಡ್ಡ ದಂಡೇ ರಾಷ್ಟ್ರ ರಾಜಧಾನಿ ದೆಹಲಿಯತ್ತ ಮುಖ ಮಾಡಿದೆ. ಇಂದು ಮುಂಜಾನೆ 3 ಗಂಟೆಯ ವಿಮಾನದಲ್ಲೇ ಕೆ.ಎಚ್. ಮುನಿಯಪ್ಪ, ಪ್ರಿಯಾಂಕ್ ಖರ್ಗೆ ಹಾಗೂ ಎನ್.ಎಸ್. ಬೋಸರಾಜು ಸೇರಿದಂತೆ ಹಲವು ಪ್ರಮುಖ ನಾಯಕರು ದೆಹಲಿಗೆ ತಲುಪಿದ್ದಾರೆ. ಸದ್ಯ ಸಚಿವರಾಗಿರುವವರು ಮುಂದಿನ ಸಂಪುಟದಲ್ಲೂ ತಮ್ಮ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಹಿರಿಯ ಶಾಸಕರಾಗಿದ್ದೂ ಈವರೆಗೆ ಸಚಿವ ಸ್ಥಾನ ಸಿಗದ ನಾಯಕರು ಈ ಬಾರಿ ಮಂತ್ರಿಗಿರಿ ಪಡೆಯಲು ವರಿಷ್ಠರ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.
ವರಿಷ್ಠರೊಂದಿಗೆ ಡಿಕೆಶಿ ಮಹತ್ವದ ಸಭೆ:
ಇದೇ ಸಂದರ್ಭದಲ್ಲಿ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಶಾಸಕಾಂಗ ಪಕ್ಷದ (CLP) ಸಭೆ ಹಾಗೂ ಹೊಸ ಸರ್ಕಾರದ ರಚನೆ ಕುರಿತು ಪ್ರಮುಖ ಚರ್ಚೆಗಳು ನಡೆಯಲಿವೆ. ಮೊದಲ ಹಂತದಲ್ಲಿ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಎಷ್ಟು ಜನ ಸಚಿವರು ಪ್ರಮಾಣ ವಚನ ಸ್ವೀಕರಿಸಬೇಕು ಮತ್ತು ಯಾರಿಗೆಲ್ಲ ಸ್ಥಾನ ನೀಡಬೇಕು ಎಂಬ ಬಗ್ಗೆ ಹೈಕಮಾಂಡ್‌ನಿಂದ ಅವರು ಅಂತಿಮ ನಿರ್ದೇಶನ ಪಡೆಯಲಿದ್ದಾರೆ.
ಮತ್ತೆ ಸಚಿವರಾಗುವ ರೇಸ್‌ನಲ್ಲಿರೋರು ಯಾರು?
ಹೊಸ ಸಂಪುಟದಲ್ಲಿ ಹಳೆಯ ಸಚಿವರ ಪೈಕಿ ಕನಿಷ್ಠ 11 ರಿಂದ 13 ನಾಯಕರು ಮತ್ತೆ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ ಎನ್ನಲಾಗಿದೆ. ರಾಜಕೀಯ ವಲಯದ ಲೆಕ್ಕಾಚಾರಗಳ ಪ್ರಕಾರ ಪ್ರಿಯಾಂಕ್ ಖರ್ಗೆ, ಕೃಷ್ಣಭೈರೇಗೌಡ, ಸತೀಶ್ ಜಾರಕಿಹೊಳಿ, ಕೆ.ಜೆ. ಜಾರ್ಜ್, ಈಶ್ವರ ಖಂಡ್ರೆ, ಎಂ.ಬಿ. ಪಾಟೀಲ್, ಡಾ. ಜಿ. ಪರಮೇಶ್ವರ್, ಎಚ್.ಕೆ. ಪಾಟೀಲ್, ಕೆ.ಎಚ್. ಮುನಿಯಪ್ಪ, ಶಿವರಾಜ ತಂಗಡಗಿ, ಮಂಕಾಳು ವೈದ್ಯ, ಸಂತೋಷ್ ಲಾಡ್ ಹಾಗೂ ದಿನೇಶ್ ಗುಂಡೂರಾವ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಹೈಕಮಾಂಡ್ ಹಸಿರು ನಿಶಾನೆ ತೋರಿದರೆ ಈ ಹಳೆಯ ಮುಖಗಳು ಹೊಸ ಸಂಪುಟದಲ್ಲೂ ಮುಂದುವರಿಯಲಿವೆ.

